ADVERTISEMENT

ಗಡಿಯಲ್ಲಿ ಭದ್ರತೆ ಕಡಿಮೆಗೊಳಿಸಲಾಗದು: ಸಚಿವ ಜಿತೇಂದ್ರ ಸಿಂಗ್‌

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2023, 14:38 IST
Last Updated 28 ಅಕ್ಟೋಬರ್ 2023, 14:38 IST
ಜಿತೇಂದ್ರ ಸಿಂಗ್‌
ಜಿತೇಂದ್ರ ಸಿಂಗ್‌   

ಜಮ್ಮು: ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಯ ಘಟನೆಗಳು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಆದರೆ, ಇತ್ತೀಚಿನ ಅಪ್ರಚೋದಿತ ಗುಂಡಿನ ದಾಳಿಯ ಕಾರಣ ಭಾರತವು ಪಾಕಿಸ್ತಾನದ ವಿರುದ್ಧ ತನ್ನ ಭದ್ರತೆಯನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಶುಕ್ರವಾರ ಹೇಳಿದರು.

‘ಜಮ್ಮುವಿನ ಅರ್ನಿಯಾದಲ್ಲಿ 2021ರ ಬಳಿಕ ಮೊದಲ ಬಾರಿ ಕದನವಿರಾಮ ಉಲ್ಲಂಘನೆಯಾಗಿದೆ. ಇಲ್ಲಿ ಪಾಕಿಸ್ತಾನಿ ರೇಂಜರ್‌ಗಳು ಗಡಿಯಾಚೆಯಿಂದ ಶೆಲ್‌ ದಾಳಿ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಹಲವು ಮನೆಗಳು ಹಾನಿಯಾಗಿದ್ದು, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧ ಮತ್ತು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ’ ಎಂದು ಅವರು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಗಡಿ ನಿಯಂತ್ರಣ ರೇಖೆಯಾದ್ಯಂತ ಒಳನುಸುವಿಕೆಯೂ ನಡೆಯುತ್ತಿರುವ ಕಾರಣ, ನಾವು ಭದ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ’ ಎಂದು ಸಚಿವರು ಸಾಂಬಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಜಮ್ಮು ಕಾಶ್ಮೀರದಲ್ಲಿ ಒಂಬತ್ತು ವರ್ಷಗಳಲ್ಲಿ ಹಿಂಸಾಚಾರ ಕಡಿಮೆಯಾಗಿದೆ. ಅದರಲ್ಲೂ ವಿಶೇಷವಾಗಿ, ಜಮ್ಮು– ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ (2019ರ ಆಗಸ್ಟ್‌ನಲ್ಲಿ) ಹಿಂಸಾಚಾರ ಕಡಿಮೆಯಾಗಿದೆ’ ಎಂದು ಹೇಳಿದರು.

‘2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕದಿಂದ ಭಾರತದ ಧೋರಣೆ ಬದಲಾಗಿದೆ. 2016ರ ಸೆಪ್ಟೆಂಬರ್‌ನಲ್ಲಿ ಸೇನೆಯು ನಿರ್ದಿಷ್ಟ ದಾಳಿ ನಡೆಸಿತ್ತು. 2019ರ ಫೆಬ್ರುವರಿಯಲ್ಲಿ ಭಾರತೀಯ ವಾಯು ಪಡೆಯು ಬಾಲಾಕೊಟ್‌ ಮೇಲೆ ವೈಮಾನಿಕ ದಾಳಿ ನಡೆಸಿತ್ತು’ ಎಂದು ಅವರು ಸ್ಮರಿಸಿದರು.

‘ಈ ಮೂಲಕ ಭಾರತವು ಗಡಿಯಾಚೆಯ ಪ್ರಾಯೋಜಿತ ಭಯತ್ಪಾದಕ ದಾಳಿಗಳನ್ನು ಸಮರ್ಥವಾಗಿ ಎದುರಿಸುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.