ಚಂಡೀಗಢ: ಹರಿಯಾಣ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದ್ದು, ಅರ್ಹ ಮತದಾರರು ತಮ್ಮ ಶಕ್ತಿಯನ್ನು ಅರಿತು ಹಕ್ಕನ್ನು ಚಲಾಯಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಮನವಿ ಮಾಡಿದ್ದಾರೆ.
90 ಕ್ಷೇತ್ರಗಳನ್ನು ಒಳಗೊಂಡಿರುವ ಹರಿಯಾಣ ವಿಧಾನಸಭೆ ಚುನಾವಣೆ ಬಿಗಿ ಭದ್ರತೆಯೊಂದಿಗೆ ಇಂದು ಮುಂಜಾನೆ 7 ಗಂಟೆಗೆ ಪ್ರಾರಂಭಗೊಂಡಿದ್ದು, ಸಂಜೆ 6ಕ್ಕೆ ಮುಕ್ತಾಯಗೊಳ್ಳಲಿದೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.
ಕುಸ್ತಿಪಟು ವಿನೇಶ್ ಫೋಗಟ್ ಅವರು ಜಿಂದ್ ಜಿಲ್ಲೆಯ ಜುಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಚರ್ಕಿ ದಾದ್ರಿ ಜಿಲ್ಲೆಯ ಬಲಾಲಿಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಫೋಗಟ್, ‘ಇಂದು ಬದಲಾವಣೆಯ ದಿನವಾಗಿದ್ದು, ಹರಿಯಾಣ ಜನರು ಕಾಂಗ್ರೆಸ್‌ನಿಂದ ಭಾರಿ ನಿರೀಕ್ಷೆಗಳನ್ನು ಹೊಂದಿದ್ದಾರೆ. ಪ್ರತಿಯೊಬ್ಬರು ತಮ್ಮ ಮತ ಚಲಾಯಿಸಬೇಕು’ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಫೋಗಟ್, ‘ನಿರುದ್ಯೋಗ, ಔಷಧಿ ಮತ್ತು ಮಹಿಳಾ ಸುರಕ್ಷತೆ ರಾಜ್ಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ. ಮುಂಬರುವ ಐದು ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೆಲಸ ಮಾಡಲು ನಾವು ಬಯಸುತ್ತೇವೆ. ಇಂದು ಬದಲಾವಣೆಯ ದಿನವಾಗಿದೆ. ಈ ದಿನ ಹೊಸ ಭರವಸೆಯನ್ನು ಜಾಗೃತಗೊಳಿಸುವ ದಿನ. ಆದ್ದರಿಂದ ರಾಜ್ಯದ ಅರ್ಹ ಮತದಾರರು ತಮ್ಮ ಶಕ್ತಿಯನ್ನು ಅರಿತು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.
ಬಿಜೆಪಿಯ 10 ವರ್ಷಗಳ ಆಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದಾರೆ. ರೈತರು ಮತ್ತು ಕುಸ್ತಿಪಟುಗಳ ವಿರುದ್ಧ ಪಕ್ಷ ದೌರ್ಜನ್ಯ ಎಸಗುತ್ತಿದೆ ಎಂದು ಅವರು ಹೇಳಿದರು.
ಹರಿಯಾಣದಾದ್ಯಂತ ಕಾಂಗ್ರೆಸ್ ಪರ ಅಲೆಯಿದೆ. ರಾಜ್ಯದಲ್ಲಿ 60 ರಿಂದ 70 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ ಕೇವಲ ಜಾತೀಯತೆ ಮತ್ತು ದ್ವೇಷದ ರಾಜಕಾರಣ ಮಾಡುತ್ತದೆ ಎಂಬುದನ್ನು ಹರಿಯಾಣದ ಜನರು ಅರ್ಥಮಾಡಿಕೊಂಡಿದ್ದಾರೆ. ಜುಲಾನಾ ಕ್ಷೇತ್ರದಲ್ಲಿ ಫೋಗಟ್ ಬಾರಿ ಅಂತರದಿಂದ ಗೆಲ್ಲುತ್ತಾರೆ.ಬಜರಂಗ್ ಪುನಿಯಾ, ಕುಸ್ತಿಪಟು ಮತ್ತು ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.