ADVERTISEMENT

ಸಂಜಯ್ ಗಾಂಧಿ ಆಸ್ಪತ್ರೆ ಪರವಾನಗಿ ಅಮಾನತು: ಮರುಪರಿಶೀಲಿಸಲು ವರುಣ್ ಗಾಂಧಿ ಒತ್ತಾಯ

ಉತ್ತರ ಪ್ರದೇಶ ಸರ್ಕಾರಕ್ಕೆ ಸಂಸದ ವರುಣ್ ಗಾಂಧಿ ಪತ್ರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 13:56 IST
Last Updated 22 ಸೆಪ್ಟೆಂಬರ್ 2023, 13:56 IST
ವರುಣ್ ಗಾಂಧಿ
ವರುಣ್ ಗಾಂಧಿ   

ನವದೆಹಲಿ: ಅಮೇಠಿಯಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಯ ಪರವಾನಗಿ ಅಮಾನತು ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಶುಕ್ರವಾರ ಒತ್ತಾಯಿಸಿದ್ದಾರೆ. 

ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಆಸ್ಪತ್ರೆಯ ಪರವಾನಗಿಯನ್ನು ಸೋಮವಾರ ಅಮಾನತು ಮಾಡಿತ್ತು.

ಈ ಕುರಿತು ಕೂಲಂಕಷವಾಗಿ ತನಿಖೆಗೊಳಪಡಿಸದೆ, ಏಕಾಏಕಿ ಕ್ರಮ ಕೈಗೊಂಡಿರುವುದರಿಂದ ಈ ಆಸ್ಪತ್ರೆ ಮೇಲೆ ಅವಲಂಬಿತರಾಗಿದ್ದ ಬಡವರಿಗೆ ಅನ್ಯಾಯವಾಗಿದೆ ಎಂದು ವರುಣ್ ಗಾಂಧಿ ಅವರು ಪ್ರತಿಪಾದಿಸಿದ್ದಾರೆ. 

ADVERTISEMENT

ಈ ಸಂಬಂಧ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ಬರೆದಿರುವ ಪತ್ರವನ್ನು ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಸರ್ಕಾರದ ಕ್ರಮದಿಂದಾಗಿ ಈ ಪ್ರಾಂತ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಪ್ರಕರಣದಲ್ಲಿ ಹೊಣೆಗಾರಿಕೆ ನಿರ್ಣಾಯಕವಾಗಿದ್ದರೂ, ನಿಷ್ಪಕ್ಷಪಾತ ಮತ್ತು ನ್ಯಾಯೋಚಿತವಾದ ತತ್ವಗಳನ್ನು ಎತ್ತಿಹಿಡಿಯುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ. 

ಈ ಆಸ್ಪತ್ರೆ ಜತೆ ನನಗೆ ಭಾವನಾತ್ಮಕ ಸಂಬಂಧ ಇರುವುದು ಹೌದು. ಆದರೆ, ನನ್ನ ಅಥವಾ ನನ್ನ ಕುಟುಂಬಕ್ಕಾಗಿ ಈ ಅರ್ಜಿ ಸಲ್ಲಿಸುತ್ತಿಲ್ಲ. ಬದಲಿಗೆ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಕೋರಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.