ADVERTISEMENT

3,300 ಕೆ.ಜಿ ಮಾದಕ ವಸ್ತು ವಶ, ಐವರ ಬಂಧನ

ಪಿಟಿಐ
Published 28 ಫೆಬ್ರುವರಿ 2024, 16:05 IST
Last Updated 28 ಫೆಬ್ರುವರಿ 2024, 16:05 IST
<div class="paragraphs"><p>ಅರಬ್ಬಿ ಸಮುದ್ರದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 3,300 ಕೆ.ಜಿಯಷ್ಟು ಮಾದಕ ವಸ್ತುವನ್ನು ಭಾರತೀಯ ನೌಕಾಪಡೆ, ಎನ್‌ಸಿಬಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿವೆ </p></div>

ಅರಬ್ಬಿ ಸಮುದ್ರದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 3,300 ಕೆ.ಜಿಯಷ್ಟು ಮಾದಕ ವಸ್ತುವನ್ನು ಭಾರತೀಯ ನೌಕಾಪಡೆ, ಎನ್‌ಸಿಬಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿವೆ

   

–ಪಿಟಿಐ ಚಿತ್ರ

ಪೋರಬಂದರ್‌/ನವದೆಹಲಿ: ಗುಜರಾತ್‌ ಕರಾವಳಿ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 3,300 ಕೆ.ಜಿಯಷ್ಟು ಮಾದಕ ವಸ್ತುಗಳನ್ನು ಭದ್ರತಾ ಸಿಬ್ಬಂದಿ ಮತ್ತು ಮಾದಕ ವಸ್ತು ತಡೆ ಸಂಸ್ಥೆಗಳು ಬುಧವಾರ ವಶಪಡಿಸಿಕೊಂಡಿದ್ದು, ಐವರು ವಿದೇಶಿಗರನ್ನು ಬಂಧಿಸುವೆ.

ADVERTISEMENT

ವಶಪಡಿಸಿಕೊಂಡಿರುವ ಮಾದಕ ವಸ್ತುಗಳ ಮೌಲ್ಯವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹ 1,300 ಕೋಟಿಯಿಂದ ₹ 2,000 ಕೋಟಿಯಷ್ಟು ಇರಬಹುದು ಎಂದು ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಪ್ರಧಾನ ನಿರ್ದೇಶಕ ಎಸ್‌.ಎನ್‌. ಪ್ರಧಾನ್‌ ಮಾಹಿತಿ ನೀಡಿದ್ದಾರೆ.

‘ನೌಕಾಪಡೆ, ಎನ್‌ಸಿಬಿ ಮತ್ತು ಗುಜರಾತ್‌ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಐತಿಹಾಸಿಕ ಯಶಸ್ಸಾಗಿದೆ. ದೇಶವನ್ನು ಮಾದಕ ವಸ್ತು ಮುಕ್ತವಾಗಿಸುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬದ್ಧತೆಗೆ ಇದು ಸಾಕ್ಷಿಯಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

‘ಸಾಗರಮಂಥನ’ ಕಾರ್ಯಾಚರಣೆ:

ಖಚಿತ ಮಾಹಿತಿಯ ಮೇರೆಗೆ, ಅರಬ್ಬಿ ಸಮುದ್ರದ ಅಂತರರಾಷ್ಟ್ರೀಯ ಜಲಗಡಿ ಉದ್ದಕ್ಕೂ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ನೌಕಾಪಡೆಯ ಪಿ8ಐ ಹೆಲಿಕಾಪ್ಟರ್‌ ನಿಗಾವಹಿಸಿತ್ತು. ಯುದ್ಧನೌಕೆ ಮತ್ತು ಹೆಲಿಕಾಪ್ಟರ್‌ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 3,300 ಕೆ.ಜಿ (3,110 ಕೆ.ಜಿ ಚರಸ್‌, 158.3 ಕೆ.ಜಿ ಮೆಥಾಂಫೆಟಮಿನ್‌ ಮತ್ತು 24.6 ಕೆ.ಜಿ ಮಾರ್ಫಿನ್‌) ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಹಡಗನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಯಿತು’ ಎಂದು ನೌಕಾಪಡೆಯು ‘ಎಕ್ಸ್‌’ನಲ್ಲಿ ತಿಳಿಸಿದೆ. 

ನೌಕಾಪಡೆ ಮತ್ತು ಎನ್‌ಸಿಬಿ ನಡುವಿನ ಸಹಕಾರ, ಸಮನ್ವಯ ಮತ್ತು ಸಂಯೋಜಿತ ಕಾರ್ಯದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲು ಸಾಧ್ಯವಾಯಿತು ಎಂದು ನೌಕಾಪಡೆ ಹೇಳಿದೆ. ಈ ಕಾರ್ಯಾಚರಣೆಗೆ ‘ಸಾಗರಮಂಥನ್‌–1’ ಎಂಬ ಸಂಕೇತನಾಮ ನೀಡಲಾಗಿತ್ತು. ಕೆಲವು ವಾರಗಳಿಂದ ಸಮುದ್ರ ಮಾರ್ಗದ ಉದ್ದಕ್ಕೂ ನಿಗಾವಹಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎನ್‌ಸಿಬಿ ಹೇಳಿದೆ. 

ನಿಷೇಧಿತ ಈ ಪದಾರ್ಥಗಳನ್ನು ‘ರಾಸ್‌ ಅವದ್‌ ಗೂಡ್ಸ್‌ ಕಂಪನಿ, ಪಾಕಿಸ್ತಾನ’ ಎಂಬ ಮುದ್ರೆ ಹೊಂದಿರುವ ಪ್ಯಾಕೆಟ್‌ಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ. 

ಮಾದಕ ವಸ್ತುಗಳ ಮೌಲ್ಯವನ್ನು ಲೆಕ್ಕ ಹಾಕಲು ಯಾವುದೇ ಮಾನದಂಡಗಳಿಲ್ಲ. ಅದಾಗ್ಯೂ ಅಂದಾಜಿನ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ ಚರಸ್‌ಗೆ 5ರಿಂದ 10 ಲಕ್ಷ ಮತ್ತು ಮೆಥಾಂಫೆಟಮಿನ್‌ ಮತ್ತು  ಹೆರಾಯಿನ್‌ಗೆ ಪ್ರತಿ ಕೆ.ಜಿಗೆ ₹ 2ರಿಂದ 5 ಕೋಟಿ ಆಗಬಹುದು ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.

‘ಇಲ್ಲಿಯವರೆಗೂ ದೇಶದಲ್ಲಿ ನಡೆದಿರುವ ಅತಿದೊಡ್ಡ ಕಡಲಾಚೆಯ ಮಾದಕವಸ್ತು ವಶ ಪ್ರಕರಣ ಇದಾಗಿದೆ. ಕೆಲ ವರ್ಷಗಳಲ್ಲಿ ಸಮುದ್ರ ಮಾರ್ಗದ ಮೂಲಕ ಮಾದಕವಸ್ತುಗಳ ಕಳ್ಳಸಾಗಣೆ ಹೆಚ್ಚಾಗಿರುವುದನ್ನು ನಾವು ಗಮನಿಸಿದ್ದೇನೆ. ಆದ್ದರಿಂದಲೇ ನೌಕಾಪಡೆ, ಕರಾವಳಿ ಪಡೆ, ಕಸ್ಟಮ್ಸ್‌ ಅಧಿಕಾರಿಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಪ್ರಧಾನ್‌ ವಿವರಿಸಿದರು. 

ಐವರು ವಿದೇಶಿಗರ ಬಂಧನ: 

ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಮೀನುಗಾರಿಕಾ ದೋಣಿಯನ್ನು ಪೋರಬಂದರ್‌ಗೆ ತರಲಾಗಿದ್ದು, ಅದರಲ್ಲಿದ್ದ ಐವರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಉಪ ಮಹಾನಿರ್ದೇಶಕ (ಕಾರ್ಯಾಚರಣೆ) ಜ್ಞಾನೇಶ್ವರ್‌ ಸಿಂಗ್‌ ತಿಳಿಸಿದ್ದಾರೆ. ‘ಬಂಧಿತರು ಪಾಕಿಸ್ತಾನ ಅಥವಾ ಇರಾನ್‌ ಪ್ರಜೆಗಳಾಗಿರಬಹುದು. ಅವರ ಬಳಿ ಯಾವುದೇ ಗುರುತಿನ ಚೀಟಿ ಪತ್ತೆಯಾಗಿಲ್ಲ. ಬಂಧಿತರ ಬಳಿಯಿದ್ದ ಉಪಗ್ರಹ ಫೋನ್‌ ಮತ್ತು ನಾಲ್ಕು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಸಿಂಗ್‌ ಹೇಳಿದರು.

‘ಮಾದಕ ವಸ್ತುಗಳ ಪ್ಯಾಕೆಟ್‌ಗಳ ಮೇಲೆ ಪಾಕಿಸ್ತಾನಿ ಆಹಾರ ಕಂಪನಿಯ ಹೆಸರು ನಮೂದಾಗಿದೆ. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದರು. 

ಕೇರಳದ ಕರಾವಳಿಯಲ್ಲಿ ಎನ್‌ಸಿಬಿ ಮತ್ತು ನೌಕಾಪಡೆ ಜಂಟಿಯಾಗಿ 2023ರಲ್ಲಿ 2,500 ಕೆ.ಜಿಯಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.