ಅಂಬಾಲ: ಹರಿಯಾಣದ ಅಂಬಾಲದಲ್ಲಿ ನಡೆದ ಮಿಲಿಟರಿ ಪೊಲೀಸ್ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಸರೋಜಾ ಮತ್ತು ಸುನೀತಾ ಅವರು ಬರೋಬ್ಬರಿ 700 ಕಿ.ಮೀ ಪ್ರಯಾಣಿಸಿ ಬಂದಿದ್ದರು.
ರಾಜಸ್ಥಾನದ ನಾಗೌರ್ ಜಿಲ್ಲೆಯವರಾದ 16 ವರ್ಷದ ಸರೋಜಾ ಹಾಗೂ 18 ವರ್ಷದ ಸುನೀತಾ ಅವರು ಮಿಲಿಟರಿ ಪೊಲೀಸ್ ನೇಮಕಾತಿಗಾಗಿ ಸೆಪ್ಟೆಂಬರ್ 7ರಿಂದ 11ರವರೆಗೆ ನಡೆದ ದೈಹಿಕ ಸಾಮರ್ಥ್ಯದ ಪರೀಕ್ಷೆಗಾಗಿ ಇಲ್ಲಿಗೆ ಬಂದಿದ್ದರು.
ಇದನ್ನು ಓದಿ:ಮಹಿಳಾ ಸೇನಾ ಭರ್ತಿ ರ್ಯಾಲಿ ಆರಂಭ
ಅಷ್ಟು ದೂರದಿಂದ ಬಂದಿದ್ದರು ಆದರೆ, ದೈಹಿಕ ಪರೀಕ್ಷೆಯಲ್ಲಿ ಅವರು ಪಾಸ್ ಆಗದ ಕಾರಣ ಮತ್ತೆ ಊರ ಕಡೆ ಮುಖಮಾಡಬೇಕಾಯಿತು. ’ಬೇಸರವಿಲ್ಲ.. ನಾವು ಮತ್ತೆ ಬರುತ್ತೇವೆ’ ಎಂದು ಸುನೀತಾ ಹೇಳಿದರು.
’1600 ಮೀಟರ್ ಓಟದ ಪರೀಕ್ಷೆಯಲ್ಲಿ ಮೂರುವರೆ ಸುತ್ತು ಹಾಕಿ, ಹೊಟ್ಟು ನೋವಿಂದ ಬಿದ್ದು ಬಿಟ್ಟೆ. ಸಾಕಷ್ಟು ಹುಡುಗಿಯರಿಗೆ ಓಟ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ’ ಎಂದು ಸರೋಜ ಅನುಭವ ಹಂಚಿಕೊಂಡರು.
‘ಬೆಳಿಗ್ಗೆ 2.30ಕ್ಕೆ ಅಂಬಾಲ ತಲುಪಿದ್ದೆವು. ನಿದ್ರೆ ಸರಿಯಾಗಿ ಆಗಿರಲಿಲ್ಲ. ಅಲ್ಲದೆ ದೂರದಿಂದ ಪ್ರಯಾಣ ಮಾಡಿದ್ದರಿಂದ ಹೆಚ್ಚಿನ ಆಯಸವಿತ್ತು. ಹೀಗಿದ್ದು ಅವರು ತಮ್ಮ ಪ್ರಯತ್ನ ಮಾಡಿದರು. ಬಿಸಿಲು ಹೆಚ್ಚಿದ್ದರಿಂದ ಅನೇಕರು ಸುಸ್ತಾದರು’ ಎಂದು ಸುನೀತಾ ಮತ್ತು ಸರೋಜಾ ಅವರ ಸಂಬಂಧಿಕರಾದ ರಾಂಪಾಲ್ ತಿಳಿಸಿದರು.
ಸೇನೆಯಲ್ಲಿ ಕೆಲಸ ಮಾಡಬೇಕೆಂದು ಇಲ್ಲಿಗೆ ಬಂದ ಬಹುತೇಕ ಹುಡುಗಿಯ ಆಕಾಂಕ್ಷೆ. ‘ಈ ಹಿಂದೆ ಕೇವಲ ಅಧಿಕಾರಿ ಹುದ್ದೆಗಿಂತ ಮೇಲಿನಲ್ಲಿ ಮಾತ್ರ ಮಹಿಳೆಯರಿಗೆ ಅವಕಾಶವಿತ್ತು. ಅದಕ್ಕೂ ನಾನು ಪ್ರಯತ್ನಿಸಿದ್ದೆ. ಆದರೆ, ಆಗಲಿಲ್ಲ. ಸೇನಾ ಸಮವಸ್ತ್ರ ಧರಿಸಲು ಇದು ಸದಾವಕಾಶ ಎನಿಸಿ ಈ ಪರೀಕ್ಷೆ ತೆಗೆದುಕೊಂಡೆ’ ಎಂದು ದೆಹಲಿಅಭ್ಯರ್ಥಿಡಾಲಿ ಹೇಳಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಮಹಿಳಾ ಸೈನಿಕರ ನೇಮಕಾತಿ ರ್ಯಾಲಿ
ಐದು ದಿನಗಳ ಈ ನೇಮಕಾತಿಯಲ್ಲಿ ಸಾಕಷ್ಟು ಯುವ ಮಹಿಳಾ ಉತ್ಸಾಹಿಗಳು ಪಾಲ್ಗೊಂಡಿದ್ದರು. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಚಂಡೀಗಢ, ರಾಜಸ್ಥಾನ ಮತ್ತು ದೆಹಲಿಯ ಅಭ್ಯರ್ಥಿಗಳಿಗೆ ಅಂಬಾಲ ನೇಮಕಾತಿ ಕೇಂದ್ರದಲ್ಲಿ ಪರೀಕ್ಷೆ ಏರ್ಪಡಿಸಲಾಗಿತ್ತು.
ಇದೇ ಮೊದಲ ಬಾರಿಗೆ ಮಿಲಿಟರಿ ಪೊಲೀಸ್ ಸೇವೆಗೆ ಮಹಿಳೆಯರನ್ನು ನೇಮಿಸಿಕೊಳ್ಳುವ ತೀರ್ಮಾನವನ್ನು ಸೇನೆ ಕೈಗೊಂಡಿದೆ. ಮೊದಲ ಹಂತದಲ್ಲಿ 100 ಪೊಲೀಸರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ.
ಸೇನೆಯಲ್ಲಿ ಅಧಿಕಾರಿಗಿಂತ ಮೇಲಿನ ಹುದ್ದೆಗಳಲ್ಲಿ ಮಹಿಳೆಯರ ನೇಮಕ ಈಗಾಗಲೇ ಇದೆ. ಆದರೆ, ಇದೇ ಮೊದಲ ಬಾರಿಗೆ 'ಅಧಿಕಾರಿ ಹುದ್ದೆ'ಗಿಂತ ಕೆಳಗಿನ ವಿಭಾಗ'(ಪಿಬಿಒಆರ್)ದಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿದೆ. ಸಾಮಾನ್ಯ ಕರ್ತವ್ಯದ ಸೈನಿಕರು (ಮಹಿಳಾ ಮಿಲಿಟರಿ ಪೊಲೀಸ್) ಎಂಬ ಹುದ್ದೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.