ADVERTISEMENT

ನೇಮಕಾತಿ | ಮಧ್ಯೆ ನಿಯಮ ಬದಲಾವಣೆ ಸಲ್ಲದು: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 15:38 IST
Last Updated 7 ನವೆಂಬರ್ 2024, 15:38 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ನೇಮಕಾತಿ ಜಾಹೀರಾತಿನಲ್ಲಿ ಸ್ಪಷ್ಟವಾದ ಉಲ್ಲೇಖ ಇಲ್ಲದಿದ್ದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಚಾಲ್ತಿಯಲ್ಲಿರುವಾಗ, ಮಧ್ಯದಲ್ಲಿ ನೇಮಕಾತಿ ನಿಯಮಗಳನ್ನು ಬದಲಿಸಬಾರದು’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಪೀಠ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠವು ಗುರುವಾರ ಈ ಕುರಿತು ಮಹತ್ವದ ಆದೇಶವನ್ನು ನೀಡಿದೆ.

‘ನೇಮಕಾತಿ ಪ್ರಕ್ರಿಯೆಯು ಹುದ್ದೆಗಳ ಭರ್ತಿಗೆ ಜಾಹೀರಾತು ನೀಡುವ ದಿನ ಆರಂಭವಾಗಲಿದೆ. ಹುದ್ದೆಗಳ ಭರ್ತಿಯು ಪೂರ್ಣವಾಗುವ ಮೂಲಕ ಅಂತ್ಯವಾಗಲಿದೆ’ ಎಂದೂ ವಿವರಿಸಿದೆ.

ADVERTISEMENT

ನ್ಯಾಯಮೂರ್ತಿಗಳಾದ ಹೃಷಿಕೇಷ ರಾಯ್, ಪಿ.ಎಸ್‌.ನರಸಿಂಹ, ಪಂಕಜ್ ಮಿತ್ತಲ್ ಮತ್ತು ಮನೋಜ್‌ ಮಿಶ್ರಾ ಅವರು ಈ ಪೀಠದ ಇತರೆ ಸದಸ್ಯರಾಗಿದ್ದಾರೆ. 

ಒಂದು ವೇಳೆ ನಿಯಮಗಳನ್ನು ಮಧ್ಯದಲ್ಲಿ ನೇಮಕಾತಿ ಪ್ರಕ್ರಿಯೆಯು ಚಾಲ್ತಿಯಲ್ಲಿರುವಾಗ ಬದಲಿಸುವುದೇ ಆದರೆ ಅದು ಸಂವಿಧಾನದ ವಿಧಿ 14ರ (ಸಮಾನತೆಯ ಹಕ್ಕು) ಉದ್ದೇಶವನ್ನು ಈಡೇರಿಸುವಂತೆ ಇರಬೇಕು ಎಂದೂ ಅಭಿಪ್ರಾಯಪಟ್ಟಿದೆ. 

‘ನೇಮಕಾತಿ ಸಂಸ್ಥೆಗಳು ನೇಮಕ ಪ್ರಕ್ರಿಯೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವಂತೆ ಹಾಗೂ ಪಾರದರ್ಶಕವಾಗಿ, ತಾರತಮ್ಯವಿಲ್ಲದೆ ಹಾಗೂ ನೇಮಕಾತಿ ಉದ್ದೇಶ ಸಾಧನೆಗೆ ಪೂರಕವಾಗಿ ನಿಯಮಗಳನ್ನು ರೂಪಿಸಬೇಕು’ ಪೀಠವು ಈ ಕುರಿತ ತೀರ್ಪಿನಲ್ಲಿ ತಿಳಿಸಿದೆ.

‘ಉಲ್ಲೇಖಿಸುವ ನಿಯಮಗಳು ಕಾನೂನಿನ ಬಲವೊಂದಿದ್ದು, ನೇಮಕಾತಿ ಪ್ರಕ್ರಿಯೆ ಹಾಗೂ ಅರ್ಹತಾ ಮಾನದಂಡಗಳನ್ನು ಈಡೇರಿಸುವಂತಿರಬೇಕು’ ಎಂದು ಹೇಳಿದೆ.

‘ಆಯ್ಕೆ ಪಟ್ಟಿಯಲ್ಲಿ ಹೆಸರಿರುವುದು ಉದ್ಯೋಗದ ಹಕ್ಕು ನೀಡುವುದಿಲ್ಲ. ರಾಜ್ಯ ಅಥವಾ ಅದರ ನೇಮಕಾತಿ ಮಂಡಳಿಯು ಸಕಾರಣಕ್ಕಾಗಿ ಉದ್ಯೋಗ ಭರ್ತಿ ಮಾಡದೇ ಇರುವ ತೀರ್ಮಾನವನ್ನು ತೆಗೆದುಕೊಳ್ಳಬಹುದು’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಆದರೆ, ಒಂದು ವೇಳೆ ಹುದ್ದೆಗಳು ಖಾಲಿ ಇದ್ದಾಗ ರಾಜ್ಯ ಅಥವಾ ಅದರ ನೇಮಕಾತಿ ಮಂಡಳಿಗಳು ಆಯ್ಕೆಪಟ್ಟಿಯಲ್ಲಿ ಇರುವವರನ್ನು ನೇಮಕಾತಿಗೆ ಪರಿಗಣಿಸುವುದನ್ನು ನಿರಾಕರಿಸಲಾಗದು ಎಂದು ಪೀಠವು ಇದೇ ಸಂದರ್ಭದಲ್ಲಿ ಹೇಳಿದೆ. 

ನೇಮಕಾತಿಗೆ ಸಂಬಂಧಿಸಿದ ಜಾಹೀರಾತಿನಲ್ಲಿ ನೇಮಕಾತಿಯ ವಿವಿಧ ಹಂತಗಳಿಗೆ ಪ್ರತ್ಯೇಕ ಮಾನದಂಡಗಳನ್ನು ನಿಗದಿಪಡಿಸಿದ್ದರೆ ಅಥವಾ ಅಂತಹ ಕಾರ್ಯಸೂಚಿ ಇದ್ದಲ್ಲಿ ಅದನ್ನು ನೇಮಕಾತಿ ಪ್ರಕ್ರಿಯೆ ಆರಂಭದಲ್ಲೇ ಅದನ್ನು ಉಲ್ಲೇಖಿಸಬೇಕು ಎಂದು ಅಭಿಪ್ರಾಯಪಟ್ಟಿದೆ. 

ಸರ್ಕಾರಿ ಹುದ್ದೆಗಳಿಗಾಗಿ ನೇಮಕಾತಿ ಮಾನದಂಡ ಕುರಿತು, ಮೂವರು ಸದಸ್ಯರ ಪೀಠವು 2013 ಮಾರ್ಚ್‌ನಲ್ಲಿ ತನಗೆ ವರ್ಗಾವಣೆ ಮಾಡಿದ್ದ ಪ್ರಶ್ನೆಗೂ ಪೀಠ ಉತ್ತರಿಸಿತು.

1965ರ ತೀರ್ಪು ಉಲ್ಲೇಖಿಸಿದ್ದ ಮೂವರು ಸದಸ್ಯರ ಪೀಠವು, ನೇಮಕಾತಿ ಮಾನದಂಡಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಬದಲಿಸುವ ಅವಕಾಶವನ್ನು ರಾಜ್ಯ ಅಥವಾ ಅದರ ನೇಮಕಾತಿ ಸಂಸ್ಥೆಗಳಿಗೆ ನೀಡದಿರುವುದು ಮೂಲಸೂತ್ರ ಎಂದು ಅಭಿಪಾಯಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.