ADVERTISEMENT

ಎದ್ದು ಕಾಣುವ ತಪ್ಪು ಸರಿಪಡಿಸಲಾಗಿದೆ: ಸುಪ್ರೀಂ ಕೋರ್ಟ್‌

1998ರ ತೀರ್ಪನ್ನು ಅಸಿಂಧುಗೊಳಿಸಿದ ಕ್ರಮದ ಬಗ್ಗೆ ಸಂವಿಧಾನ ಪೀಠದ ವಿವರಣೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 16:53 IST
Last Updated 4 ಮಾರ್ಚ್ 2024, 16:53 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: 1998ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ನೀಡಿದ್ದ ತೀರ್ಪನ್ನು ಅಸಿಂಧುಗೊಳಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠವು ‘ಕಣ್ಣಿಗೆ ಕಾಣುವ ತಪ್ಪೊಂದನ್ನು ಸರಿಪಡಿಸದೆ ಇದ್ದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಹಾಗೂ ಸಮಾಜದ ಸುವ್ಯವಸ್ಥೆಗೆ ಕೆಡುಕು ಉಂಟಾಗುತ್ತದೆ’ ಎಂದು ಹೇಳಿದೆ.

ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವ ತೀರ್ಪುಗಳು ಬಹುಕಾಲದಿಂದ ಚಾಲ್ತಿಯಲ್ಲಿ ಇದ್ದರೂ ಅವುಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಬಹುದು ಎಂದು ಏಳು ನ್ಯಾಯಮೂರ್ತಿಗಳ ಪೀಠವು ಹೇಳಿದೆ.

ADVERTISEMENT

1998ರ ಪ್ರಕರಣದ ತೀರ್ಪನ್ನು ಪುನರ್‌ ಪರಿಶೀಲನೆಗೆ ಒಳಪಡಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌, ಸಮಾಜದಲ್ಲಿನ ವ್ಯವಸ್ಥೆಯ ಮೇಲೆ ಅದರಿಂದ ಆಗುವ ಪರಿಣಾಮದ ಬಗ್ಗೆ ಅವಲೋಕಿಸಿದೆ. ಅಲ್ಲದೆ, ಸಾರ್ವಜನಿಕ ಜೀವನದಲ್ಲಿ ಸಚ್ಚಾರಿತ್ರ್ಯವನ್ನು ಕಾಪಾಡುವ ಅಗತ್ಯದ ಬಗ್ಗೆಯೂ ಗಮನ ಹರಿಸಿದೆ.

ಒಂದು ತೀರ್ಪು ಎಷ್ಟು ವರ್ಷಗಳಿಂದ ಚಾಲ್ತಿಯಲ್ಲಿ ಇದೆ ಎಂಬುದು ಮುಖ್ಯವಲ್ಲ ಎಂದು ಪೀಠವು ಹೇಳಿದೆ. ‘ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಕೆಲವು ತೀರ್ಪುಗಳು ಬಹುಕಾಲದಿಂದ ಚಾಲ್ತಿಯಲ್ಲಿ ಇದ್ದಿದ್ದರೂ, ಅಂತಹ ತೀರ್ಪುಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಇರಲಿಲ್ಲ ಎಂದಾದರೆ ಅವುಗಳನ್ನು ಅಸಿಂಧುಗೊಳಿಸುವ ಕೆಲಸವನ್ನು ಈ ನ್ಯಾಯಾಲಯ ಮಾಡಿದೆ’ ಎಂದು ಪೀಠವು ಸ್ಪಷ್ಟಪಡಿಸಿದೆ.

ಸಾರ್ವಜನಿಕರ ಒಳಿತಿಗೆ ಕೆಟ್ಟದನ್ನು ಮಾಡುವ ರೀತಿಯಲ್ಲಿ ಒಂದು ತಪ್ಪು ಉಳಿದುಕೊಳ್ಳಲು ಬಿಡಲಾಗದು ಎಂದು ಕೋರ್ಟ್‌ ಹೇಳಿದೆ.

‘ತಪ್ಪು ಇದೆ ಎಂಬ ಅಭಿಪ್ರಾಯ ಕೋರ್ಟ್‌ಗೆ ಮೂಡಿದಲ್ಲಿ ತಾನೇ ಹಿಂದೆ ನೀಡಿದ್ದ ತೀರ್ಪುಗಳನ್ನು ಪುನರ್‌ ಪರಿಶೀಲನೆಗೆ ಒಳಪಡಿಸಲು ಈ ಕೋರ್ಟ್‌ಗೆ ಅವಕಾಶ ಇದೆ. ಅಥವಾ, ತೀರ್ಪಿನ ಪರಿಣಾಮವು ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆ ತರುವಂಥದ್ದಾಗಿದ್ದರೆ ಅಂತಹ ತೀರ್ಪನ್ನು ಮರುಪರಿಶೀಲಿಸಬಹುದು. ಸಂವಿಧಾನದ ತಾತ್ವಿಕತೆಗೆ ವಿರುದ್ಧವಾಗಿ ಇರುವ ತೀರ್ಪುಗಳನ್ನು ಕೂಡ ಮರುಪರಿಶೀಲಿಸಬಹುದು’ ಎಂದು ನ್ಯಾಯಪೀಠವು ಹೇಳಿದೆ.

ತೀರ್ಪುಗಳ ಮರುಪರಿಶೀಲನೆಯ ಕೆಲಸವನ್ನು ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಈ ನ್ಯಾಯಾಲಯವು ಸ್ವಇಚ್ಛೆಯಿಂದ ಮಾಡುತ್ತದೆ. ಏಕೆಂದರೆ ಎದ್ದು ಕಾಣುವಂತಹ ತಪ್ಪನ್ನು ಸರಿಪಡಿಸದೆ ಇದ್ದರೆ ಅದರಿಂದ ಸಾರ್ವಜನಿಕ ಹಿತಕ್ಕೆ ಧಕ್ಕೆ ಆಗುತ್ತದೆ’ ಎಂದು ಪೀಠವು ವಿವರಿಸಿದೆ.

ಶಾಸನಸಭೆಗಳ ವಿಚಾರವಾಗಿ ಸಂವಿಧಾನದಲ್ಲಿ ವಿವರಿಸಿರುವ ಅಧಿಕಾರ, ಹಕ್ಕು ಮತ್ತು ರಕ್ಷಣೆಗಳನ್ನು ಕಡಿಮೆ ಮಾಡುವ ಕೆಲಸವನ್ನು ಈ ತೀರ್ಪು ಮಾಡುವುದಿಲ್ಲ. ಆದರೆ, ಈ ತೀರ್ಪು ಸಂವಿಧಾನದ 105 ಹಾಗೂ 194ನೇ ವಿಧಿಗಳ ಸರಿಯಾದ ವ್ಯಾಖ್ಯಾನಕ್ಕೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.