ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತರ ಸಂಸ್ಥೆ ಸ್ಥಾನಮಾನ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ 1981ರಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠವು ನೀಡಿದ್ದ ಆದೇಶವು ‘ಕಾನೂನಿನ ದೃಷ್ಟಿಯಲ್ಲಿ ತಪ್ಪು’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ 1967ರಲ್ಲಿ ನೀಡಿದ್ದ ತೀರ್ಪನ್ನು ಇಬ್ಬರು ನ್ಯಾಯಮೂರ್ತಿಗಳ ಪೀಠವು 1981ರಲ್ಲಿ ಪ್ರಶ್ನಿಸಿತ್ತು. ಮಾತ್ರವಲ್ಲ, ಈ ಪ್ರಕರಣವನ್ನು ಏಳು ಸದಸ್ಯರನ್ನೊಳಗೊಂಡ ಪೀಠಕ್ಕೆ ವರ್ಗಾಯಿಸಿತ್ತು.
‘ದ್ವಿಸದಸ್ಯ ಪೀಠವು ತನಗಿಂತ ದೊಡ್ಡ ಪೀಠದ (ಐವರು ಸದಸ್ಯರ) ತೀರ್ಪನ್ನು ಅನುಮಾನಿಸಲು ಅಥವಾ ಒಪ್ಪದಿರಲು ಯಾವುದೇ ಅಧಿಕಾರವನ್ನು ಹೊಂದಿಲ್ಲ’ ಎಂದು ತಮ್ಮ 102 ಪುಟಗಳ ಪ್ರತ್ಯೇಕ ತೀರ್ಪಿನಲ್ಲಿ ಅವರು ತಿಳಿಸಿದ್ದಾರೆ.
‘ಎಸ್. ಅಜೀಜ್ ಬಾಷಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಮರುಪರಿಶೀಲಿಸುವ ಪೀಠವು ಏಳು ನ್ಯಾಯಮೂರ್ತಿಗಳನ್ನು ಒಳಗೊಂಡಿರಬೇಕು ಎಂದು 1981ರಲ್ಲಿ ದ್ವಿಸದಸ್ಯ ಪೀಠ ನಿರ್ದಿಷ್ಟವಾಗಿ ಹೇಳಿತ್ತು. ಅದು ನ್ಯಾಯಾಂಗದ ಸ್ಥಾಪಿತ ಶಿಷ್ಟಾಚಾರಗಳಿಗೆ ಅನುಗುಣವಾಗಿಲ್ಲ’ ಎಂದರು.
‘ದ್ವಿಸದಸ್ಯ ಪೀಠದ ನಿರ್ಧಾರವು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಸಂವಿಧಾನದ 145ನೇ ವಿಧಿಯಡಿ ಹೊಂದಿರುವ ವಿಶೇಷ ಅಧಿಕಾರವನ್ನು ಅವಮಾನಿಸುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.