ADVERTISEMENT

ಎನ್‌ಸಿಇಆರ್‌ಟಿ: 11ನೇ ತರಗತಿ ಪಠ್ಯದಿಂದ ‘ಮೌಲಾನಾ’ಗೆ ಕೊಕ್

ಸ್ವಾತಂತ್ರ್ಯಹೋರಾಟಗಾರ, ದೇಶದ ಪ್ರಥಮ ಶಿಕ್ಷಣ ಮಂತ್ರಿ ಉಲ್ಲೇಖವನ್ನೇ ಕೈಬಿಟ್ಟ ಎನ್‌ಸಿಇಆರ್‌ಟಿ

ಪಿಟಿಐ
Published 13 ಏಪ್ರಿಲ್ 2023, 17:23 IST
Last Updated 13 ಏಪ್ರಿಲ್ 2023, 17:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಪ್ರಥಮ ಶಿಕ್ಷಣ ಸಚಿವ, ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್‌ ಕಲಾಂ ಅಜಾದ್ ಅವರನ್ನು ಕುರಿತ ಪಠ್ಯವನ್ನು 11ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ಎನ್‌ಸಿಇಆರ್‌ಟಿ ಕೈಬಿಟ್ಟಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕಳೆದ ಶೈಕ್ಷಣಿಕ ವರ್ಷವೂ ‘ಪುನರಾವರ್ತನೆ’ ಮತ್ತು ‘ಅಪ್ರಸ್ತುತ’ ಎಂಬ ಕಾರಣ ನೀಡಿ ಗುಜರಾತ್‌ ಗಲಭೆ, ಮೊಗಲರ ಕೋರ್ಟ್‌, ತುರ್ತು ಪರಿಸ್ಥಿತಿ, ಶೀತಲ ಸಮರ ಹಾಗೂ ನಕ್ಸಲ್‌ ಆಂದೋಲನದ ಉಲ್ಲೇಖವಿದ್ದ ಪಠ್ಯಗಳನ್ನು ಕೈಬಿಟ್ಟಿತ್ತು. ಪಠ್ಯ ಬದಲಾವಣೆ ಕುರಿತ ಹೇಳಿಕೆಯಲ್ಲಿ ಈ ಕುರಿತ ಯಾವುದೇ ಉಲ್ಲೇಖವಿರಲಿಲ್ಲ.

ಆದರೆ ಎನ್‌ಸಿಇಆರ್‌ಟಿಯು, ಹೊಸ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಪಠ್ಯ ಪರಿಷ್ಕರಣೆ ಮಾಡಿಲ್ಲ. ಕಳೆದ ಜೂನ್‌ನಲ್ಲೇ ಪರಿಷ್ಕರಣೆ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಆ ಪೈಕಿ ಕೆಲ ತೀರ್ಮಾನಗಳನ್ನು ಈ ವರ್ಷದಲ್ಲಿ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.

ADVERTISEMENT

‘ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದ ಹೇಳಿಕೆಯಲ್ಲಿ, ಪಠ್ಯಕ್ರಮದಲ್ಲಿ ಜಾರಿಗೊಳಿಸಲು ಉದ್ದೇಶಿಸಿದ್ದ ಕೆಲವೊಂದು ಬದಲಾವಣೆಗಳ ಉಲ್ಲೇಖವು ‘ಕಣ್ತಪ್ಪಿ’ನಿಂದ ಬಿಟ್ಟುಹೋಗಿತ್ತು‘ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಅವರು ಪ್ರತಿಕ್ರಿಯಿಸಿದ್ದಾರೆ.

11ನೇ ತರಗತಿಯ ರಾಜ್ಯಶಾಸ್ತ್ರ ‍ಪಠ್ಯಪುಸ್ತಕದ ‘ಸಂವಿಧಾನ: ಏಕೆ ಮತ್ತು ಹೇಗೆ’ ಶೀರ್ಷಿಕೆ ಕುರಿತ ಮೊದಲ ಅಧ್ಯಾಯದ ಮೊದಲ ಸಾಲು ಪರಿಷ್ಕರಿಸಿ, ಸಂವಿಧಾನ ಸಮಿತಿ ಸಭೆ ಕುರಿತ ವರದಿಯಲ್ಲಿ ಮೌಲಾನಾ ಅಜಾದ್‌ ಹೆಸರು ಕೈಬಿಡಲಾಗಿದೆ.

ಪರಿಷ್ಕೃತವಾಗಿರುವ ಪಠ್ಯದ ಸಾಲಿನಲ್ಲಿ ‘...ಸಾಮಾನ್ಯವಾಗಿ ಸಭೆಯ ಅಧ್ಯಕ್ಷತೆಯನ್ನು ಜವಾಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್‌, ಸರ್ದಾರ್ ಪಟೇಲ್‌ ಅಥವಾ ಬಿ.ಆರ್.ಅಂಬೇಡ್ಕರ್ ವಹಿಸುತ್ತಿದ್ದರು‘ ಎಂದು ಉಲ್ಲೇಖಿಸಲಾಗಿದೆ.

ಇದೇ ಪಠ್ಯಪುಸ್ತಕದ ‘ಸಂವಿಧಾನದ ಸಿದ್ಧಾಂತ’ ಶೀರ್ಷಿಕೆಯ ಪಠ್ಯದಲ್ಲಿ ‘ಷರತ್ತುಬದ್ಧವಾಗಿ ಭಾರತ ಒಕ್ಕೂಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಸೇರ್ಪಡೆ’ ಕುರಿತ ಉಲ್ಲೇಖ ಕೈಬಿಡಲಾಗಿದೆ. ಈ ಹಿಂದೆ ‘...ಉದಾಹರಣೆಗೆ ಭಾರತದ ಒಕ್ಕೂಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಸೇರ್ಪಡೆಯನ್ನು, ಸಂವಿಧಾನದ 370ನೇ ವಿಧಿ ಅನುಸಾರ ಅದರ ಸ್ವಾಯತ್ತೆ ರಕ್ಷಣೆ ಷರತ್ತಿನೊಂದಿಗೆ ಮಾಡಲಾಗಿತ್ತು’ ಎಂದಿತ್ತು.

ಕಳೆದ ವರ್ಷ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಮೌಲಾನಾ ಅಜಾದ್‌ ಫೆಲೋಷಿಪ್ ಕೈಬಿಟ್ಟಿತ್ತು. ಆರು ಅಧಿಸೂಚಿತ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಐದು ವರ್ಷ ಆರ್ಥಿಕ ನೆರವು ಒದಗಿಸಲು 2008ರಲ್ಲಿ ಈ ಫೆಲೋಷಿಪ್‌ ಆರಂಭಿಸಲಾಗಿತ್ತು.

‘ಗಾಂಧೀಜಿಯವರ ಸಾವು ದೇಶದ ಕೋಮು ಪರಿಸ್ಥಿತಿಯ ಮೇಲೆ ಭಾವನಾತ್ಮಕ ಪರಿಣಾಮ ಬೀರಿತ್ತು’, ‘ಹಿಂದೂ ಮುಸ್ಲಿಮರ ಏಕತೆಗೆ ಗಾಂಧೀಜಿ ಕೈಗೊಂಡಿದ್ದ ಯತ್ನವು ಹಿಂದೂ ಮತೀಯವಾದಿಗಳನ್ನು ಪ್ರಚೋದಿಸಿತ್ತು’, ‘ಆರ್‌ಎಸ್‌ಎಸ್‌ನಂತಹ ಕೆಲ ಸಂಘಟನೆಗಳನ್ನು ಕೆಲ ಕಾಲ ನಿಷೇಧಿಸಲಾಗಿತ್ತು’ ಇತ್ಯಾದಿ ಸಾಲುಗಳನ್ನು ಈಗ 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.

ಗುಜರಾತ್‌ ಗಲಭೆಯ ಉಲ್ಲೇಖಿಬಿದ್ದ ಅಂಶಗಳನ್ನು 11ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ಕೈಬಿಡಲಾಗಿತ್ತು. ಅದಕ್ಕೂ ಹಿಂದೆ ಎನ್‌ಸಿಇಆರ್‌ಟಿ 12ನೇ ತರಗತಿಯ ಪಠ್ಯಪುಸ್ತಕದಿಂದ 2022ರ ಕೋಮುಗಲಭೆಯ ಉಲ್ಲೇಖವಿದ್ದ ಅಡಕಗಳನ್ನು ಕೈಬಿಡಲಾಗಿತ್ತು.

ಇತಿಹಾಸ ಮರುರಚನೆ: ಕಾಂಗ್ರೆಸ್‌ ಕಟುಟೀಕೆ
ನವದೆಹಲಿ (ಪಿಟಿಐ):
ಪಠ್ಯಪುಸ್ತಕದಿಂದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅವರ ಉಲ್ಲೇಖವನ್ನು ಕೈಬಿಟ್ಟಿರುವ ಕ್ರಮಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ‘ಇತಿಹಾಸ ಮರುರಚಿಸುವ, ಸುಳ್ಳುಗಳ ಮೇಲೆ ಕಟ್ಟಿದ ವಿಕೃತ ಪರಂಪರೆಯನ್ನು ದಾಟಿಸುವ ಯತ್ನ ನಡೆದಿದೆ‘ ಎಂದು ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಅನ್ಷುಲ್ ಅವಿಜಿತ್‌ ಅವರು, ಕೇಂದ್ರ ಸರ್ಕಾರದಿಂದ ಇತಿಹಾಸ ಮರುರಚಿಸುವ ವ್ಯವಸ್ಥಿತ ಯತ್ನ ನಡೆದಿದೆ. ಅಸತ್ಯ, ಸುಳ್ಳುಗಳನ್ನು ಆಧರಿಸಿ ರಚಿಸಿದ ವಿಕೃತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕಲಿಸಲಾಗುತ್ತಿದೆ ಎಂದರು.

’ಎನ್‌ಸಿಇಆರ್‌ಟಿ ಕ್ರಮವನ್ನು ನಾನು ಕಟುವಾಗಿ ಖಂಡಿಸುತ್ತೇನೆ. ಅವರು ದೇಶದ ಪ್ರಥಮ ಶಿಕ್ಷಣ ಮಂತ್ರಿ 14 ವರ್ಷದೊಳಗಿನವರಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂಬ ಚಿಂತನೆಗೆ ಅಡಿಪಾಯ ಹಾಕಿದವರು. ಅವರ ಹೆಸರನ್ನೇ ಕೈಬಿಟ್ಟಿರುವುದು ನಾಚಿಕೆಗೇಡು, ವಿಪರ್ಯಾಸದ ಕ್ರಮ. ಸ್ವಾತಂತ್ರ್ಯ ಹೋರಾಟಕ್ಕೆ ಮೌಲಾನಾ ಅವರ ಕೊಡುಗೆ ಅನನ್ಯ. ಗಾಂಧಿ ಸಿದ್ಧಾಂತಗಳ ಪ್ರತಿಪಾದಕ, ಚಿಂತಕ. ಸಂವಿಧಾನ ಸಮಿತಿಗಳ ಸದಸ್ಯರಾಗಿದ್ದವರು. ಇತಿಹಾಸ ಮರುರಚನೆಯ ಕ್ರಿಯೆಯಲ್ಲಿ ಯಾರೊಬ್ಬರೂ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.