ADVERTISEMENT

ತಮಿಳುನಾಡು ಹೆಸರು ಬದಲಾವಣೆ ಸೂಚಿಸಿರಲಿಲ್ಲ: ರಾಜ್ಯಪಾಲ ಆರ್.ಎನ್.ರವಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 20:44 IST
Last Updated 18 ಜನವರಿ 2023, 20:44 IST
ಆರ್.ಎನ್. ರವಿ
ಆರ್.ಎನ್. ರವಿ   

ಚೆನ್ನೈ: ‘ತಮಿಳುನಾಡು ಹೆಸರು ಬದಲಾವಣೆಗೆ ಸೂಚಿಸಿರಲಿಲ್ಲ’ ಎಂದು ರಾಜ್ಯದ ರಾಜ್ಯಪಾಲ ಆರ್‌.ಎನ್‌.ರವಿ ಅವರು ಬುಧವಾರ ಸ್ಪಷ್ಟನೆ ನೀಡಿದ್ದಾರೆ.

ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರ ಜಟಾಪಟಿ ವಿಚಾರದಲ್ಲಿ ರಾಜ್ಯ ಸರ್ಕಾರದ ಕೈ ಮೇಲಾದಂತೆ ಕಾಣುತ್ತಿದೆ. ರಾಜ್ಯದ ಹೆಸರನ್ನು ‘ತಮಿಳಗಂ’ ಎಂಬುದಾಗಿ ಬದಲಾವಣೆಗೆ ಪ್ರಸ್ತಾಪಿಸಿದ್ದ ರಾಜ್ಯಪಾಲ ರವಿ ಅವರ ನಡೆಯಿಂದ ನಷ್ಟವೇ ಅಧಿಕ ಎಂಬುದು ಗೊತ್ತಾಗುತ್ತಿದ್ದಂತೆಯೇ, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದೆ ಎನ್ನಲಾಗಿದೆ. ಹೀಗಾಗಿಯೇ, ಬುಧವಾರ ದೆಹಲಿಗೆ ತೆರಳಿದ ರಾಜ್ಯಪಾಲ ರವಿ ಅವರು ನೀಡಿರುವ ಸ್ಪಷ್ಟನೆಯು, ಉಲ್ಬಣವಾಗಬಹುದಾದ ಜಟಾಪಟಿ ಹಾಗೂ ತಮಿಳಿಗರಿಂದ ಎದುರಾಗಿರುವ ಮುಜುಗರದಿಂದ ಪಾರಾಗಲು ಯತ್ನಿಸಿದಂತೆ ತೋರುತ್ತದೆ.

‘ಕಾಶಿ ಜೊತೆಗೆ ತಮಿಳಿಗರ ನಂಟು ಬೆಸೆದಿದ್ದ ಸಮಯದಲ್ಲಿ ‘ತಮಿಳುನಾಡು’ ಎಂಬುದು ಇರಲಿಲ್ಲ. ಹೀಗಾಗಿಯೇ ತಮಿಳಗಂ ಎಂಬ ಪದವನ್ನು ಐತಿಹಾಸಿಕ ಸಾಂಸ್ಕೃತಿಕ ಅರ್ಥದಲ್ಲಿ ಬಳಸಿದ್ದೆ. ಆದರೆ, ಈ ಪದ ಬಳಕೆಯನ್ನು ರಾಜ್ಯದ ಹೆಸರು ಬದಲಾವಣೆಗೆ ಮಾಡಿದ ಪ್ರಸ್ತಾವ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ದಾರೆ. ಆದರೆ ರಾಜ್ಯಪಾಲರ ಸ್ಪಷ್ಟನೆಗೆ ತಮಿಳು ವಿದ್ವಾಂಸರು ತಿರುಗೇಟು ನೀಡಿದ್ದಾರೆ. ಶಿಲಪ್ಪದಿಗಾರಂ, ಮಣಿಮೇಕಲೈ ಮೊದಲಾದ ಸಮೃದ್ಧ ತಮಿಳು ಸಾಹಿತ್ಯದಲ್ಲಿ ತಮಿಳುನಾಡಿನ ಉಲ್ಲೇಖವಿರುವುದನ್ನು ಎತ್ತಿ ತೋರಿಸಿದ್ದಾರೆ.

ADVERTISEMENT

ಜನವರಿ 4ರಂದು ಕಾಶಿ ತಮಿಳು ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜ್ಯಪಾಲರು ‘ತಮಿಳಗಂ ಪದವು ತಮಿಳುನಾಡು ಎಂಬುದಕ್ಕಿಂತ ಹೆಚ್ಚು ಸೂಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದರು. ಇದು ಆಡಳಿತಾರೂಢ ಡಿಎಂಕೆ ಮಾತ್ರವಲ್ಲದೇ, ಪ್ರತಿಪಕ್ಷಗಳನ್ನೂ ಕೆರಳಿಸಿದೆ. ಭಾಷೆ ಹಾಗೂ ರಾಜಕೀಯ ಅಸ್ಮಿತೆಗೆ ಹೆಸರಾಗಿರುವ ತಮಿಳುನಾಡಿನಲ್ಲಿ ಬಿಜೆಪಿ ಇನ್ನೂ ಅಂಬೆಗಾಲಿಡುತ್ತಿದೆ. ಹೀಗಿರುವಾಗ, ರಾಜ್ಯಪಾಲರ ಮಾತು ಪಕ್ಷಕ್ಕೆ ಹಿನ್ನಡೆ ತರಬಹುದು ಎಂದು ಭಾವಿಸಿದ ಕೇಂದ್ರ, ಮಧ್ಯಪ್ರವೇಶ ಮಾಡಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ರಾಜ್ಯಪಾಲರ ನಡುವೆ ಇತ್ತೀಚಿನ ದಿನಗಳಲ್ಲಿ ಹಲವು ವಿಚಾರಗಳಲ್ಲಿ ಜಟಾಪಟಿ ನಡೆದಿದೆ. ಈ ಎಲ್ಲ ವಿಚಾರಗಳಲ್ಲಿ ರಾಜ್ಯಪಾಲರ ನಡೆಯನ್ನು ಬೆಂಬಲಿಸುತ್ತಾ ಬಂದಿರುವ ರಾಜ್ಯದ ಬಿಜೆಪಿ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು, ತಮಿಳಗಂ ವಿಚಾರದಲ್ಲಿ ರಾಜ್ಯಪಾಲರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವುದು ವಿಶೇಷ.

ತಮಿಳಗಂ ಸೂಕ್ತ ಹೆಸರು ಎಂದಿದ್ದರು...
‘ತಮಿಳುನಾಡು ಎಂಬ ಹೆಸರಿಗಿಂತ ತಮಿಳಗಂ ಎಂಬ ಹೆಸರು ಹೆಚ್ಚು ಸೂಕ್ತ’ ಎಂದು ರಾಜ್ಯಪಾಲ ಆರ್‌.ಎನ್‌.ರವಿ ಅವರು ಜನವರಿ 4ರಂದು ಕಾಶಿ ತಮಿಳು ಸಂಘಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದರು.

‘ತಮಿಳುನಾಡು ಎಂಬ ಹೆಸರು, ತಮ್ಮದೇ ಪ್ರತ್ಯೇಕ ದೇಶ ಎಂಬ ಭಾವನೆಯನ್ನು ತಮಿಳರಲ್ಲಿ ಮೂಡಿಸುತ್ತಿದೆ. ಹೀಗಾಗಿಯೇ ಅವರು ತಮ್ಮನ್ನು ದ್ರಾವಿಡರು ಎಂದು ಗುರುತಿಸಿಕೊಳ್ಳುತ್ತಾರೆ. ಅವರು ತಾವು ಭಾರತದ ಭಾಗ ಎಂದು ಅಂದುಕೊಂಡಿಲ್ಲ. ಹೀಗಾಗಿಯೇ ಅವರು ದೇಶಕ್ಕೆ ಸಂಬಂಧಿಸಿದ ಎಲ್ಲಾ ವಿಚಾರದಲ್ಲೂ ಭಿನ್ನ ನಿಲುವು ತೆಗೆದುಕೊಳ್ಳುತ್ತಾರೆ. ರಾಜ್ಯದ ಹೆಸರನ್ನು ತಮಿಳಗಂ ಎಂದು ಬದಲಿಸಿದರೆ ಇದು ಸರಿಹೋಗಬಹುದು’ ಎಂದು ಆ ಕಾರ್ಯಕ್ರಮದಲ್ಲಿ ರಾಜ್ಯಪಾಲ ರವಿ ಹೇಳಿದ್ದರು.

ಪೊಂಗಲ್‌ ಹಬ್ಬದ ಸಲುವಾಗಿ ರಾಜಭವನವು ಹೊರಡಿಸಿದ್ದ ಆಹ್ವಾನ ಪತ್ರಿಕೆಯಲ್ಲಿ ತಮಿಳುನಾಡು ಸರ್ಕಾರದ ಲಾಂಛನವನ್ನು ಕೈಬಿಡಲಾಗಿತ್ತು. ಜತೆಗೆ ಈ ಪತ್ರಿಕೆಯಲ್ಲಿ ರಾಜ್ಯಪಾಲರನ್ನು ‘ತಮಿಳಗಂ ರಾಜ್ಯಪಾಲ’ ಎಂದು ಸಂಬೋಧಿಸಲಾಗಿತ್ತು. ಇದಕ್ಕೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.