ADVERTISEMENT

ದೇಶದ ರಾಜಕಾರಣ ಬದಲಾಗುತ್ತಿದೆ: ಕಾಂಗ್ರೆಸ್‌

ಪಿಟಿಐ
Published 13 ಜುಲೈ 2024, 14:23 IST
Last Updated 13 ಜುಲೈ 2024, 14:23 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ‘ದೇಶದ ರಾಜಕಾರಣವು ಬದಲಾಗುತ್ತಿರುವುದನ್ನು ಉಪಚುನಾವಣೆಗಳ ಫಲಿತಾಂಶವು ಸೂಚಿಸುತ್ತಿದೆ’ ಎಂದು ಕಾಂಗ್ರೆಸ್‌ ಶನಿವಾರ ಅಭಿಪ್ರಾಯಪಟ್ಟಿದೆ. ಹಿಮಾಚಲ ಪ್ರದೇಶ ಹಾಗೂ ಬಿಜೆಪಿ ಸರ್ಕಾರವಿರುವ ಉತ್ತರಾಖಂಡದಲ್ಲಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವ ಬಗ್ಗೆಯೂ ಪಕ್ಷ ಸಂತಸ ವ್ಯಕ್ತಪಡಿಸಿದೆ.

‘ಬಿಜೆಪಿಯ ಕೊಳಕು ರಾಜಕಾರಣವನ್ನು ಎದುರಿಸಿ, ಬಿಎಸ್‌ಪಿಯಿಂದ ಮಂಗಲೌರ್‌ ಕ್ಷೇತ್ರವನ್ನು ಪಡೆದುಕೊಂಡಿದ್ದೇವೆ. ಬದರಿನಾಥ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಜಯ ಗಳಿಸಿದೆ. ಇಲ್ಲಿ ಕಾಂಗ್ರೆಸ್‌ನವರೇ ಶಾಸಕರಾಗಿದ್ದರು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಸೇರಿಕೊಂಡಿದ್ದರು. ಪಕ್ಷವನ್ನು ಬದಲಿಸಿದ್ದಕ್ಕೆ ಜನರು ಅವರಿಗೆ ಸೂಕ್ತ ಪಾಠವನ್ನೇ ಕಲಿಸಿದ್ದಾರೆ’ ಎಂದು ಉತ್ತರಾಖಂಡದಲ್ಲಿನ ಗೆಲುವಿನ ಕುರಿತು ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಬಿಜೆಪಿಯ ಎಲ್ಲ ಕುತಂತ್ರಗಳೂ ಹೀನಾಯವಾಗಿ ಸೋತವು. ಆಪರೇಷನ್‌ ಕಮಲದ ಮೂಲಕ ಇಬ್ಬರು ಪಕ್ಷೇತ್ರರ ಶಾಸಕರನ್ನು ಬಿಜೆಪಿ ತನ್ನ ಬಳಿ ಸೇರಿಸಿಕೊಂಡಿತ್ತು. ಈಗ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ’ ಎಂದು ಕಾಂಗ್ರೆಸ್‌ನ ಹಿಮಾಚಲ ಪ್ರದೇಶದಲ್ಲಿನ ಗೆಲುವಿನ ಕುರಿತು ರಮೇಶ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಹೇಗೆ ನೋಡಿದರೂ, ಈ ಫಲಿತಾಂಶವು, ದೇಶದಲ್ಲಿ ಆಗುತ್ತಿರುವ ರಾಜಕೀಯ ಬದಲಾವಣೆಯನ್ನೇ ಸೂಚಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ ಚೇತರಿಸಿಕೊಳ್ಳುತ್ತಿರುವುದನ್ನೂ ಹಾಗೂ ಬಿಜೆಪಿ ಕುರಿತು ಜನರಲ್ಲಿ ಜಿಗುಪ್ಸೆ ಹುಟ್ಟಿರುವುದನ್ನೂ ಈ ಫಲಿತಾಂಶ ಹೇಳುತ್ತಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.