ಬೆಂಗಳೂರು: ಬುಧವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿರುವ ಉದ್ಯಮಿ ರತನ್ ಟಾಟಾ ಅವರು ಮೂರು ದಿನಗಳ ಹಿಂದಷ್ಟೇ 'ಆರೋಗ್ಯವಾಗಿದ್ದೇನೆ. ಸುಳ್ಳು ಸುದ್ದಿ ಹರಡಬೇಡಿ' ಎಂದು ಮನವಿ ಮಾಡಿದ್ದರು.
ರಕ್ತದೊತ್ತಡ ಕಡಿಮೆಯಾದ ಕಾರಣ ರತನ್ ಟಾಟಾ ಅವರನ್ನು ಅಕ್ಟೋಬರ್ 7ರ ಮುಂಜಾನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದರ ಬೆನ್ನಲ್ಲೇ ಅವರ ಆರೋಗ್ಯದ ಬಗ್ಗೆ ತರಹೇವಾರಿ ಸುದ್ದಿಗಳು ಹರಿದಾಡಿದ್ದವು.
ಈ ಕುರಿತು ಅದೇ ದಿನ ಮಧ್ಯಾಹ್ನ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡು ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದರು.
'ನನ್ನ ಬಗ್ಗೆ ಚಿಂತಿಸುತ್ತಿರುವುದಕ್ಕೆ ಧನ್ಯವಾದ' ಎಂದಿದ್ದ ಅವರು, 'ನನ್ನ ಆರೋಗ್ಯದ ಕುರಿತು ಇತ್ತೀಚೆಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಅರಿವಿದೆ. ಇವೆಲ್ಲವೂ ಆಧಾರರಹಿತವಾದವು ಎಂದು ತಿಳಿಸಲು ಬಯಸುತ್ತೇನೆ. ವಯೋ ಸಂಬಂಧಿತ ವೈದ್ಯಕೀಯ ಪರೀಕ್ಷೆ ಸಲುವಾಗಿ ತಪಾಸಣೆಗೊಳಗಾಗುತ್ತಿದ್ದೇನೆ. ಕಳವಳಪಡುವ ಅಗ್ಯವಿಲ್ಲ. ಆರೋಗ್ಯವಾಗಿದ್ದೇನೆ. ವದಂತಿಯಿಂದ ದೂರವಿರುವಂತೆ ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ' ಎಂದು ಟ್ವೀಟ್ ಮಾಡಿದ್ದರು.
ಅದೇ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ರತನ್ ಮಾಡಿದ್ದ ಕೊನೇ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಿರುವ ನೆಟ್ಟಿಗರು, 'ಆತ್ಮಕ್ಕೆ ಶಾಂತಿ ಸಿಗಲಿ', 'ನಿಮ್ಮ ನೆನಪು ಅಮರ', 'ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ' ಎಂಬಿತ್ಯಾದಿ ಸಾಲುಗಳನ್ನು ಬರೆದು ಗೌರವ ಸೂಚಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.