ಅಹಮದಾಬಾದ್: ‘ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಓಲೈಕೆ ರಾಜಕಾರಣದ ಫಲವಾಗಿ ದೊಡ್ಡ ಸಂಖ್ಯೆಯ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು 1947ರಿಂದ 2014ರವರೆಗೆ ನಿರಾಕರಿಸಲಾಗಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದರು.
ಪೌರತ್ವ (ತಿದ್ದುಪಡಿ) ಕಾಯ್ದೆ 2019ರ ಅಡಿಯಲ್ಲಿ 188 ಹಿಂದೂ ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರವನ್ನು ಇಲ್ಲಿ ವಿತರಿಸಿ ಅವರು ಮಾತನಾಡಿದರು. ‘ಭಾರತದ ಒಳಗೆ ಅಕ್ರಮವಾಗಿ ನುಸುಳುವವರಿಗೆ ಹಿಂದಿನ ಸರ್ಕಾರಗಳು ಪೌರತ್ವವನ್ನು ನೀಡಿವೆ. ಆದರೆ, ದೇಶದ ಕಾನೂನನ್ನು ಅನುಸರಿಸುವವರಿಗೆ ಮಾತ್ರ ಪೌರತ್ವವನ್ನು ನಿರಾಕರಿಸಲಾಗಿದೆ’ ಎಂದು ದೂರಿದರು.
‘ಜವಾಹರಲಾಲ್ ನೆಹರೂ ಅವರು 1947, 1948 ಹಾಗೂ 1950ರಲ್ಲಿ ಪೌರತ್ವ ನೀಡುವ ಭರವಸೆಯನ್ನು ನೀಡಿದ್ದರು. ಪೌರತ್ವ ನೀಡುವ ಕುರಿತು ಮಹಾತ್ಮ ಗಾಂಧಿ ಅವರ ಕರೆಯನ್ನೂ ನೆಹರೂ ಅವರು ಮರೆತರು. ಯಾಕೆಂದರೆ, ಒಂದು ವೇಳೆ ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ಖರಿಗೆ ಪೌರತ್ವ ನೀಡಿದರೆ ಅವರ (ಕಾಂಗ್ರೆಸ್‌ನ) ಮತ ಬ್ಯಾಂಕ್‌ಗೆ ಸಿಟ್ಟು ಬರುತ್ತದೆ. ಅದಕ್ಕಾಗಿಯೇ ನೆಹರೂ ಅವರು ಪೌರತ್ವ ನೀಡಲಿಲ್ಲ. ಇದಕ್ಕಿಂತ ದೊಡ್ಡ ಪಾಪದ ಕೃತ್ಯ ಮತ್ತೊಂದಿಲ್ಲ’ ಎಂದರು.
‘ಬಾಂಗ್ಲಾ ಹಿಂದೂ ನಿರಾಶ್ರಿತರಿಗೆ ನ್ಯಾಯ ಸಿಗಲಿದೆ’
‘ಬಾಂಗ್ಲಾ ವಿಭಜನೆಯ ಕಾಲದಲ್ಲಿ ಬಾಂಗ್ಲಾದೇಶದಲ್ಲಿ ಶೇ 27ರಷ್ಟು ಹಿಂದೂಗಳು ಇದ್ದರು. ಆದರೆ ಈಗ ಅಲ್ಲಿ ಕೇವಲ ಶೇ 9ರಷ್ಟು ಹಿಂದೂಗಳಿದ್ದಾರೆ. ಅಲ್ಲಿರುವ ಹಿಂದೂ ಜನರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಿರುವುದೇ ಇದಕ್ಕೆ ಕಾರಣ’ ಎಂದು ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟರು.
ಬಾಂಗ್ಲಾದಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಲು ಎರಡು ಕಾರಣಗಳಿವೆ. ಒಂದು ಅಲ್ಲಿನ ಹಿಂದೂಗಳನ್ನು ಮತಾಂತರ ಮಾಡಿರುವುದು. ಎರಡನೇದು ಅವರೆಲ್ಲರೂ ಭಾರತದಲ್ಲಿ ಆಶ್ರಯ ಕೇಳಿಕೊಂಡು ಬಂದಿರುವುದು. ಅವರ ಧಾರ್ಮಿಕ ನಂಬಿಕೆಗಳಂತೆಯೇ ಬದುಕುವ ಹಕ್ಕು ಅವರಿಗೆ ಇಲ್ಲವೇ? ನೆರೆಯ ದೇಶದಲ್ಲಿ ಗೌರವಯುತವಾಗಿ ಬದುಕಲು ಸಾಧ್ಯವಿಲ್ಲವೆಂದು ನಮ್ಮ ದೇಶದಲ್ಲಿ ಆಶ್ರಯ ಕೇಳಿದರೆ ನಮಗೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದು ನರೇಂದ್ರ ಮೋದಿ ಅವರ ಸರ್ಕಾರ. ಅವರೆಲ್ಲರಿಗೂ ನ್ಯಾಯ ಸಿಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.