ADVERTISEMENT

ನಿಜ್ಜರ್‌ ಹತ್ಯೆ: ಕೆನಡಾ ಆರೋಪ ತಿರಸ್ಕರಿಸಲಾಗಿದೆ– ಲೋಕಸಭೆಗೆ ಕೇಂದ್ರ ಮಾಹಿತಿ

ಪಿಟಿಐ
Published 9 ಡಿಸೆಂಬರ್ 2023, 2:21 IST
Last Updated 9 ಡಿಸೆಂಬರ್ 2023, 2:21 IST
ಲೋಕಸಭೆ ಅಧಿವೇಶನ
ಲೋಕಸಭೆ ಅಧಿವೇಶನ   

ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ತನ್ನ ಆರೋಪಕ್ಕೆ ಕೆನಡಾ ಯಾವುದೇ ಪುರಾವೆಗಳನ್ನು ಒದಗಿಸಿಲ್ಲದ ಕಾರಣ ಆರೋಪವನ್ನು ಭಾರತ ತಿರಸ್ಕರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

‘ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದ್ದು, ಅಂತಹ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆನಡಾ ಸರ್ಕಾರಕ್ಕೆ ತಿಳಿಸಲಾಗಿದೆ’ ಎಂದರು.

‘ಕೆನಡಾದಲ್ಲಿ ನಡೆದ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರ ಭಾಗಿಯಾಗಿರುವ ಆರೋಪವನ್ನು ಸರ್ಕಾರ ತಿರಸ್ಕರಿಸಿದೆ. ಕೆನಡಾದ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಭಾರತ ತಿಳಿಸಿದ್ದರೂ, ಯಾವುದೇ ಮಾಹಿತಿಯನ್ನು ಕೆನಡಾ ಒದಗಿಸಿಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಕೆನಡಾದಲ್ಲಿನ ಭದ್ರತಾ ವಾತಾವರಣ ಮತ್ತು ಭಾರತ ರಾಜತಾಂತ್ರಿಕರ ವಿರುದ್ಧವೇ ಹಿಂಸಾಚಾರಕ್ಕೆ ಪ್ರಚೋದನೆಯಂತಹ ಘಟನೆಗಳು ಕೆನಡಾದಲ್ಲಿನ ಭಾರತದ ರಾಯಭಾರ ಕಚೇರಿಯ ಕೆಲಸಗಳಿಗೆ ಅಡ್ಡಿಪಡಿಸುತ್ತಿವೆ’ ಎಂದು ಹೇಳಿದ್ದಾರೆ.

‘ಸುರಕ್ಷತೆಯ ದೃಷ್ಟಿಯಿಂದ ವಿದ್ಯಾರ್ಥಿಗಳು ಸೇರಿದಂತೆ ಕೆನಡಾದಲ್ಲಿರುವ ಭಾರತೀಯ ಪ್ರಜೆಗಳಿಗೆ ಭಾರತ ಸರ್ಕಾರದ ವೆಬ್‌ಸೈಟ್‌ adad.gov.inನಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ’ ಎಂದರು.

ಜೂನ್ 18ರಂದು ನಡೆದ ಖಾಲಿಸ್ತಾನಿ ಸಿಖ್‌ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ‘ಸಂಭಾವ್ಯ’ ಕೈವಾಡ ಇರುವ ಬಗ್ಗೆ ಕೆನಡಾದ ಅಧ್ಯಕ್ಷ ಜಸ್ಟಿನ್‌ ಟ್ರೂಡೊ ಅವರು ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು. ಇದರಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ತೀವ್ರ ಬಿರುಕು ಮೂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.