ADVERTISEMENT

ಮೋದಿ 3.0: ಪಿಎಂ ಕಿಸಾನ್‌ ನಿಧಿಯ ಅನುದಾನ ಬಿಡುಗಡೆಗೆ ಮೊದಲ ಸಹಿ

ಪಿಟಿಐ
Published 10 ಜೂನ್ 2024, 6:57 IST
Last Updated 10 ಜೂನ್ 2024, 6:57 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ನವದೆಹಲಿ: ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮರುದಿನವಾದ ಸೋಮವಾರ ನರೇಂದ್ರ ಮೋದಿ ಅವರು ‘ಕಿಸಾನ್‌ ನಿಧಿ’ಯ ಹಣ ಬಿಡುಗಡೆಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದರು.

‘ಕಿಸಾನ್‌ ನಿಧಿ’ಯ 17ನೇ ಕಂತಿನ ಸುಮಾರು ₹20 ಸಾವಿರ ಕೋಟಿ ಬಿಡುಗಡೆಗೆ ಪ್ರಧಾನಿ ಸಮ್ಮತಿ ನೀಡಿದ್ದು, ಇದರಿಂದ ದೇಶದ ಸುಮಾರು 9.3 ಕೋಟಿ ರೈತರಿಗೆ ನೆರವಾಗಲಿದೆ. 

ADVERTISEMENT

‘ನಮ್ಮ ಸರ್ಕಾರ ‘ಕಿಸಾನ್ ಕಲ್ಯಾಣ’ಕ್ಕೆ (ರೈತರ ಅಭಿವೃದ್ಧಿ) ಸಂಪೂರ್ಣ ಬದ್ಧವಾಗಿದೆ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಬಳಿಕ ನಾನು ಸಹಿ ಮಾಡಿದ ಮೊದಲ ಕಡತವು ರೈತರಿಗೆ ಸಂಬಂಧಿಸಿದ್ದಾಗಿದೆ. ಮುಂದಿನ ದಿನಗಳಲ್ಲಿ ರೈತರು ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನಷ್ಟು ಕೆಲಸ ಮಾಡಲು ಬಯಸಿದ್ದೇವೆ’ ಎಂದು ಪ್ರಧಾನಿ ಹೇಳಿದರು.

ಬಾಕಿ ಹಣ ಬಿಡುಗಡೆ: ಪ್ರಧಾನಿ ಮೋದಿ ಅವರಿಗೆ ರೈತರ ಬಗ್ಗೆ ವಿಶೇಷ ಕಾಳಜಿಯೇನೂ ಇಲ್ಲ. ‘ಕಿಸಾನ್‌ ನಿಧಿ’ಯ ಕಳೆದ ತಿಂಗಳ ಬಾಕಿ ಹಣವನ್ನಷ್ಟೇ ಬಿಡುಗಡೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ.

‘ಮೋದಿ ಅವರು ತಮ್ಮ ಹೊಸ ಸರ್ಕಾರದ ಮೊದಲ ನಿರ್ಧಾರ ಎಂದು ಹೇಳುತ್ತಿರುವ 17ನೇ ಕಂತಿನ ಹಣ ಬಿಡುಗಡೆಯು ಸರ್ಕಾರದ ಯೋಜನೆಯ ಪ್ರಕಾರ ರೈತರಿಗೆ ಲಭಿಸಬೇಕಾದ ನ್ಯಾಯಸಮ್ಮತ ಹಕ್ಕು. ಇದರಲ್ಲಿ ವಿಶೇಷ ಏನೂ ಇಲ್ಲ. 17ನೇ ಕಂತಿನ ಹಣ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದ ಕಾರಣ ಹಣ ಬಿಡುಗಡೆ ತಡವಾಗಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ಪ್ರತಿಯೊಂದು ಆಡಳಿತಾತ್ಮಕ ನಿರ್ಧಾರಗಳನ್ನು ಜನರಿಗೆ ನೀಡುತ್ತಿರುವ ದೊಡ್ಡ ಕೊಡುಗೆ ಎಂಬಂತೆ ಬಿಂಬಿಸುವುದನ್ನು ಪ್ರಧಾನಿ ಅವರು ತಮ್ಮ ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಅವರು ತಮ್ಮನ್ನು ತಾವು ಅತಿಮಾನುಷ ವ್ಯಕ್ತಿ ಎಂದು ನಂಬಿದ್ದಾರೆ’ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಅವರಿಗೆ ರೈತರ ಮೇಲೆ ನಿಜವಾದ ಕಾಳಜಿ ಇದೆ ಎಂದಾದರೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಲಿ.
–ಜೈರಾಮ್‌ ರಮೇಶ್, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.