ಚಂಡೀಗಡ: ಬಿಜೆಪಿ ಮುಖಂಡ ತಜಿಂದರ್ ಸಿಂಗ್ ಬಗ್ಗಾ ಅವರಿಗೆ ಮಂಗಳವಾರ ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಜುಲೈ 5ರವರೆಗೆ ಅವರನ್ನು ಬಂಧಿಸದಂತ ಆದೇಶಿಸಿರುವ ಕೋರ್ಟ್ ಮಧ್ಯಂತರ ರಕ್ಷಣೆಯನ್ನು ಮುಂದುವರಿಸಿದೆ.
ಮಾರ್ಚ್ 3ರಂದು ನಡೆದ ಪ್ರತಿಭಟನೆಯ ವೇಳೆ ತಜಿಂದರ್ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆ ಮತ್ತು ವಿಡಿಯೊ ಆಧರಿಸಿ ಪಂಜಾಬ್ ಪೊಲೀಸರು ಕಳೆದ ಶುಕ್ರವಾರ(ಮೇ 6) ತಜಿಂದರ್ ಅವರನ್ನು ಬಂಧಿಸಿದ್ದರು.
ಬಳಿಕ, ಬಗ್ಗಾ ಬಂಧನಕ್ಕೆ ತಡೆ ವಿಧಿಸಿದ್ದ ಹೈಕೋರ್ಟ್, ಮೇ 10ರ ಮುಂದಿನ ವಿಚಾರಣೆವರೆಗೂ ತಜಿಂದರ್ ಸಿಂಗ್ ಬಗ್ಗಾ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಿತ್ತು. ಇದೀಗ ಅದನ್ಚು ವಿಸ್ತರಿಸಿದೆ.
ಈ ಮಧ್ಯೆ, ಬಗ್ಗಾ ಬಂಧನದಲ್ಲಿ ಭಾಗಿಯಾಗಿರುವ 12 ಪಂಜಾಬ್ ಪೊಲೀಸ್ ಅಧಿಕಾರಿಗಳನ್ನು ಹರಿಯಾಣ ಪೊಲೀಸರು ಕುರುಕ್ಷೇತ್ರದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಹರಿಯಾಣ ಸರ್ಕಾರದ ವಿರುದ್ಧ ಪಂಜಾಬ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿತ್ತು.
ಬಗ್ಗಾ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರವನ್ನು ಕಕ್ಷಿದಾರರನ್ನಾಗಿ ಮಾಡಬೇಕು ಮತ್ತು ದೆಹಲಿ ಹಾಗೂ ಹರಿಯಾಣ ಪೊಲೀಸರಿಗೆ ಠಾಣೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ಸಂರಕ್ಷಿಸಲು ನಿರ್ದೇಶನ ನೀಡಬೇಕೆಂದು ಪಂಜಾಬ್ ಅರ್ಜಿಯಲ್ಲಿ ಕೋರಿತ್ತು.
ಪಂಜಾಬ್ ಪೊಲೀಸರು ಬಗ್ಗಾ ಅವರನ್ನು ಏರಿಯಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಎಸ್‌ಎಎಸ್ ನಗರಕ್ಕೆ (ಮೊಹಾಲಿ) ಕರೆದೊಯ್ಯುತ್ತಿದ್ದಾಗ, ಹರಿಯಾಣ ಪೊಲೀಸರು ಅವರನ್ನು ಮಧ್ಯದಲ್ಲಿ ತಡೆದು ಕುರುಕ್ಷೇತ್ರಕ್ಕೆ ಕರೆತಂದರು. ಅಲ್ಲಿ ಅವರನ್ನು ದೆಹಲಿ ಪೊಲೀಸರ ಕಸ್ಟಡಿಗೆ ನೀಡಲಾಯಿತು ಎಂದು ಪಂಜಾಬ್ ಸರ್ಕಾರ ತನ್ನ ಅರ್ಜಿಯಲ್ಲಿ ಆರೋಪಿಸಿತ್ತು.
ಆದರೆ, ಪಂಜಾಬ್ ಆರೋಪವನ್ನು ತಳ್ಳಿ ಹಾಕಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್, ಒಬ್ಬ ಅಧಿಕಾರಿಯನ್ನೂ ವಶಕ್ಕೆ ಪಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಕುರಿತಂತೆ, ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿರುವ ದೆಹಲಿ ಪೊಲೀಸರು, ಮೇ 6 ರಂದು ಬಗ್ಗಾನನ್ನು ಕಸ್ಟಡಿಗೆ ತೆಗೆದುಕೊಂಡು, ಕಾನೂನು ಪ್ರಕ್ರಿಯೆಯ ನಂತರ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಬಗ್ಗಾ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು, ಪಂಜಾಬ್ ಪೊಲೀಸರ ವಿರುದ್ಧ ಎರಡು ಪ್ರಕರಣಗಳನ್ನೂ ದಾಖಲಿಸಿದ್ದಾರೆ.
ಬಗ್ಗಾ ಅವರ ತಂದೆಯ ದೂರಿನ ಮೇರೆಗೆ ದೆಹಲಿ ಪೊಲೀಸರು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಈ ಮಧ್ಯೆ, ಪಂಜಾಬ್ ಪೊಲೀಸರು ಬಗ್ಗಾ ಅವರನ್ನು ದೆಹಲಿಯಿಂದ ಮೊಹಾಲಿಗೆ ಕರೆದೊಯ್ಯುತ್ತಿದ್ದಾಗ, ಹರಿಯಾಣ ಪೊಲೀಸರು ಮಧ್ಯದಲ್ಲಿ ತಡೆದು ವಶಕ್ಕೆ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.