ಜೈಪುರ: ರಾಜಸ್ಥಾನದಲ್ಲಿರುವ ಎಸ್ಎಂಎಸ್ ವೈದ್ಯಕೀಯ ಕಾಲೇಜು ಮತ್ತು ಅದರ ಸಹ ಸಂಸ್ಥೆಗಳಲ್ಲಿ ರೋಗಿಗಳು ದಾಖಲಾಗಬೇಕಾದರೆ ನೋಂದಣಿ ಪತ್ರದಲ್ಲಿ ರೋಗಿಯ ಧರ್ಮ ಬಹಿರಂಗ ಪಡಿಸಬೇಕು. ಆಸ್ಪತ್ರೆಗೆ ದಾಖಲಾಗುವಾಗ ರೋಗಿಗಳ ಧರ್ಮ ಯಾಕೆ ಎಂದು ಆಸ್ಪತ್ರೆಯ ಆಡಳಿತ ವರ್ಗದವರಲ್ಲಿ ಕೇಳಿದರೆ ಜನರಲ್ಲಿ ನಿರ್ದಿಷ್ಟ ರೋಗಗಳು ಯಾರಿಗೆ ಬರುತ್ತವೆ ಎಂಬ ಡೇಟಾಬೇಸ್ ತಯಾರಿಸುವುದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಎಸ್‌ಎಂಎಸ್ ವೈದ್ಯಕೀಯ ಕಾಲೇಜು ಮತ್ತು ಅದರ ಸಹ ಸಂಸ್ಥೆಗಳಲ್ಲಿ ರೋಗಿಗಳನ್ನು ದಾಖಲು ಮಾಡುವ ಮುನ್ನ ನೋಂದಣಿ ಪತ್ರದಲ್ಲಿ ರೋಗಿಯ ಧರ್ಮ ನಮೂದಿಸಬೇಕು ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಸುಧೀರ್ ಭಂಡಾರಿ ಅವರು ಜುಲೈ 12ರಂದು ಸುತ್ತೋಲೆ ಕಳಿಸಿದ್ದಾರೆ.
ಈಗಾಗಲೇ ಎಸ್‌ಎಂಎಸ್ ವೈದ್ಯಕೀಯ ಕಾಲೇಜಿನಲ್ಲಿ ಈ ರೀತಿ ರೋಗಿಯ ಧರ್ಮ ನಮೂದಿಸುತ್ತಿದ್ದು, ಇತರ ಸಹ ಸಂಸ್ಥೆಗಳಲ್ಲಿ ಈ ಪ್ರಕ್ರಿಯೆ ಶೀಘ್ರದಲ್ಲಿಯೇ ಆರಂಭವಾಗಲಿದೆ.
ರೋಗಿಗಳ ಧರ್ಮ, ಲಿಂಗ, ವಯಸ್ಸು, ಪ್ರದೇಶ ಮೊದಲಾದವುಗಳನ್ನು ನಮೂದಿಸಿದರೆ ಅಧ್ಯಯನ ವಿಷಯಕ್ಕೆ ಈ ಡೇಟಾಬೇಸ್ ಸಹಕಾರಿಯಾಗುತ್ತದೆ ಎಂದು ಎಸ್‌ಎಂಎಸ್ ಆಸ್ಪತ್ರೆಯ ಸುಪರಿಟೆಂಡೆಂಟ್ ಡಿಎಸ್ ಮೀನಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.