ADVERTISEMENT

ಮತಾಂತರ ನಡೆಯುವ ಧಾರ್ಮಿಕ ಸಭೆಗಳನ್ನು ಸ್ಥಗಿತಗೊಳಿಸಿ: ಅಲಹಾಬಾದ್‌ ಹೈಕೋರ್ಟ್

ದೇಶದ ಬಹುಸಂಖ್ಯಾತರು ಮುಂದೊಂದು ದಿನ ಅಲ್ಪಸಂಖ್ಯಾತರಾಗುತ್ತಾರೆ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

ಪಿಟಿಐ
Published 2 ಜುಲೈ 2024, 14:38 IST
Last Updated 2 ಜುಲೈ 2024, 14:38 IST
   

ಪ್ರಯಾಗರಾಜ್‌(ಉತ್ತರ ಪ್ರದೇಶ): ಮತಾಂತರ ನಡೆಯುವ ಧಾರ್ಮಿಕ ಸಭೆಗಳನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೇ ಹೋದಲ್ಲಿ ದೇಶದ ಬಹುಸಂಖ್ಯಾತರು ಮುಂದೊಂದು ದಿನ ಅಲ್ಪಸಂಖ್ಯಾತರಾಗುತ್ತಾರೆ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

‘ಪ್ರಸಾರ’ ಎಂಬ ಪದದ ಅರ್ಥ ‘ಪ್ರಚಾರ’ ಮಾಡುವುದು ಎಂದಾಗುತ್ತದೆ. ಆದರೆ, ಯಾವುದೇ ಒಬ್ಬ ವ್ಯಕ್ತಿಯನ್ನು ಆತನ ಧರ್ಮದಿಂದ ಮತ್ತೊಂದು ಧರ್ಮಕ್ಕೆ ಪರಿವರ್ತಿಸು ಎಂದರ್ಥವಲ್ಲ’ ಎಂದು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರವಾಲ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಹೇಳಿದೆ.

ತನ್ನ ಗ್ರಾಮದ ಹಲವರನ್ನು ಮತಾಂತರಗೊಳಿಸಿದ ಆರೋಪ ಎದುರಿಸುತ್ತಿರುವ ಕೈಲಾಶ್‌ ಎಂಬುವವರ ಜಾಮೀನು ಅರ್ಜಿ ತಿರಸ್ಕರಿಸಿ ಸೋಮವಾರ ಆದೇಶ ಹೊರಡಿಸಿದ ವೇಳೆ, ನ್ಯಾಯಮೂರ್ತಿ ಅಗರವಾಲ್‌ ಈ ಮಾತು ಹೇಳಿದ್ದಾರೆ.

ADVERTISEMENT

ಕೈಲಾಶ್‌ ವಿರುದ್ಧ ಉತ್ತರ ಪ್ರದೇಶದ ಕಾನೂನು ಬಾಹಿರ ಧಾರ್ಮಿಕ ಮತಾಂತರ ಕಾಯ್ದೆ 2021ರಡಿ ಪ್ರಕರಣ ದಾಖಲಾಗಿದೆ.

‘ವ್ಯಕ್ತಿಗೆ ತನ್ನ ಇಚ್ಛೆಯ ಮತಾಚರಣೆ, ಧರ್ಮ ಪ್ರಸಾರದ ಸ್ವಾತಂತ್ರ್ಯವನ್ನು ಸಂವಿಧಾನದ 25ನೇ ವಿಧಿ ನೀಡಿದೆ. ಆದರೆ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡುವುದಕ್ಕೆ ಅವಕಾಶ ನೀಡಿಲ್ಲ’ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

‘ನವದೆಹಲಿಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಸಭೆಗಳಿಗೆ ಕೈಲಾಶ್ ತನ್ನ ಗ್ರಾಮದ ಜನರನ್ನು ಕರೆದುಕೊಂಡು ಹೋಗುತ್ತಿದ್ದರು ಹಾಗೂ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿತ್ತು ಎಂಬುದನ್ನು ತನಿಖಾಧಿಕಾರಿ ದಾಖಲಿಸಿಕೊಂಡಿರುವ ಹೇಳಿಕೆಗಳು ಸ್ಪಷ್ಟವಾಗಿ ಹೇಳುತ್ತವೆ’ ಎಂದು ನ್ಯಾಯಮೂರ್ತಿ ಅಗರವಾಲ್‌ ಆದೇಶದಲ್ಲಿ ಹೇಳಿದ್ದಾರೆ.

‘ಈ ಪ್ರಕರಣದಲ್ಲಿ, ತನ್ನ ಸಹೋದರನ ಕುರಿತು ಮಾಹಿತಿ ನೀಡಿರುವ ಮಹಿಳೆ, ತನ್ನ ಸಹೋದರ ಮರಳಿ ಬಂದೇ ಇಲ್ಲ ಎಂಬುದು ಸೇರಿದಂತೆ ಸೇರಿದಂತೆ ಕೈಲಾಶ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ, ಅರ್ಜಿದಾರ ಜಾಮೀನಿಗೆ ಅರ್ಹನಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಕಾರಣ, ಕೈಲಾಶ್‌ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವ್ಯಕ್ತಿಗೆ ತನ್ನ ಇಚ್ಛೆಯ ಮತಾಚರಣೆ, ಧರ್ಮ ಪ್ರಸಾರದ ಸ್ವಾತಂತ್ರ್ಯವನ್ನು ಸಂವಿಧಾನದ 25ನೇ ವಿಧಿ ನೀಡಿದೆ. ಆದರೆ, ಒಂದು ಧರ್ಮದವರನ್ನು ಮತ್ತೊಂದು ಧರ್ಮಕ್ಕೆ ಸೇರ್ಪಡೆ ಮಾಡಲು ಅವಕಾಶ ನೀಡಿಲ್ಲ.
–ರೋಹಿತ್ ರಂಜನ್ ಅಗರವಾಲ್‌, ನ್ಯಾಯಮೂರ್ತಿ

‘ಉತ್ತರ ಪ್ರದೇಶದಾದ್ಯಂತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಆರ್ಥಿಕವಾಗಿ ದುರ್ಬಲರಾದವರು ಸೇರಿದಂತೆ ಇತರ ಜಾತಿಗಳ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದ ಹಲವು ಪ್ರಕರಣಗಳು ನ್ಯಾಯಾಲಯದ ಗಮನಕ್ಕೆ ಬಂದಿವೆ’ ಎಂದೂ ಹೇಳಿದ್ದಾರೆ.

ಪ್ರಕರಣವೇನು?: ರಾಮಪಾಲ್ ಎಂಬುವವರನ್ನು ಆರೋಪಿ ಕೈಲಾಶ್‌, ದೆಹಲಿಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಸಭೆಗಳಿಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಇಂತಹ ಸಭೆಗಳಲ್ಲಿ ಪಾಲ್ಗೊಳ್ಳುವವರನ್ನು ಕ್ರೈಸ್ತರನ್ನಾಗಿ ಮತಾಂತರ ಮಾಡಲಾಗುತ್ತಿತ್ತು. ರಾಮಪಾಲ್ ಸಹೋದರಿ ರಾಮ್‌ಕಲಿ ಪ್ರಜಾಪತಿ ನೀಡಿದ ಮಾಹಿತಿ ಆಧರಿಸಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.

‘ನನ್ನ ಸಹೋದರ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದ ನಂತರ ಆತನನ್ನು ವಾರದೊಳಗೆ ಗ್ರಾಮಕ್ಕೆ ಮರಳಿ ತಂದು ಬಿಡುವುದಾಗಿ ಕೈಲಾಶ್‌ ಹೇಳಿದ್ದ’ ಎಂಬುದಾಗಿ ರಾಮ್‌ಕಲಿ ಪ್ರಜಾಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಾರ ಕಳೆದರೂ ತನ್ನ ಸಹೋದರ ಮರಳದಿರುವ ಕುರಿತು ಕೈಲಾಶ್‌ನನ್ನು ಪ್ರಶ್ನಿಸಿದಾಗ ಆತನಿಂದ ಸಮರ್ಪಕ ಉತ್ತರ ಸಿಗದ ಕಾರಣ ಆಕೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.