ADVERTISEMENT

ದೂರುದಾರರನ್ನು ಪಕ್ಷಕಾರರನ್ನಾಗಿ ಮಾಡಿ; ರಾಮದೇವಗೆ ಸುಪ್ರೀಂ ಕೋರ್ಟ್ ಸೂಚನೆ

ಅಲೋಪಥಿ ಕುರಿತ ಹೇಳಿಕೆ: ರಾಮದೇವಗೆ ’ಸುಪ್ರೀಂ’ ಸೂಚನೆ

ಪಿಟಿಐ
Published 19 ಏಪ್ರಿಲ್ 2024, 23:53 IST
Last Updated 19 ಏಪ್ರಿಲ್ 2024, 23:53 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಅಲೋಪಥಿ ಔಷಧಗಳ ಕುರಿತ ಹೇಳಿಕೆಗೆ ಸಂಬಂಧಿಸಿ ತಮ್ಮ ವಿರುದ್ಧದ ಕ್ರಿಮಿನಲ್‌ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಯೋಗ ಗುರು ರಾಮದೇವ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ‘ನಿಮ್ಮ ಅರ್ಜಿಯಲ್ಲಿ ದೂರುದಾರರನ್ನು ಪಕ್ಷಕಾರರನ್ನಾಗಿ ಸೇರಿಸಿ’ ಎಂದು ರಾಮದೇವ ಅವರಿಗೆ ಶುಕ್ರವಾರ ಸೂಚಿಸಿದೆ.

ರಾಮದೇವ ಅವರ ಅರ್ಜಿಯ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್‌ ಹಾಗೂ ಪಿ.ಬಿ.ವರಾಳೆ ಅವರಿದ್ದ ನ್ಯಾಯಪೀಠ, ‘ಈ ಪ್ರಕರಣದಲ್ಲಿ ಪರಿಹಾರ ಪಡೆಯುವುದಕ್ಕಾಗಿ ನಿಮ್ಮ ವಿರುದ್ಧ ದೂರು ನೀಡಿದವರನ್ನು ಸಹ ಪಕ್ಷಕಾರರನ್ನಾಗಿ ಮಾಡಬೇಕಾಗುತ್ತದೆ’ ಎಂದು ಹೇಳಿದೆ.

ADVERTISEMENT

‘ದೂರುದಾರರನ್ನು ಪಕ್ಷಕಾರರನ್ನಾಗಿ ಮಾಡಲು ರಾಮದೇವ ಅವರು ಸ್ವತಂತ್ರರು’ ಎಂದೂ ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿತು.

‘ಕೋವಿಡ್‌–19 ಪಿಡುಗಿನ ಸಂದರ್ಭದಲ್ಲಿ, ಅಲೋಪಥಿ ಔಷಧಗಳ ಕುರಿತ ರಾಮದೇವ ನೀಡಿದ್ದ ಹೇಳಿಕೆಗಳು ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಚಿಕಿತ್ಸಾ ವಿಧಾನ ಕುರಿತು ಪೂರ್ವಗ್ರಹದಿಂದ ಕೂಡಿದ್ದವು. ಸಮರ್ಪಕ ಚಿಕಿತ್ಸೆ ಪಡೆಯುವುದರಿಂದ ಜನರು ವಿಮುಖರಾಗುವಂತೆ ಮಾಡುವಂತಿದ್ದವು’ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಎ) ಪಟ್ನಾ ಮತ್ತು ರಾಯಪುರ ಘಟಕಗಳು 2021ರಲ್ಲಿ ರಾಮದೇವ ವಿರುದ್ಧ ದೂರು ದಾಖಲಿಸಿದ್ದವು.

ಸೇವಾ ತೆರಿಗೆ ವಿಧಿಸಿದ್ದನ್ನು ಎತ್ತಿ ಹಿಡಿದ ‘ಸುಪ್ರೀಂ’

ನವದೆಹಲಿ: ವಸತಿಯುತ ಮತ್ತು ವಸತಿರಹಿತ ಯೋಗ ಶಿಬಿರಗಳಿಗೆ ಪ್ರವೇಶ ಶುಲ್ಕ ವಿಧಿಸುವ ಕಾರಣ ಪತಂಜಲಿ ಯೋಗಪೀಠ ಟ್ರಸ್ಟ್‌ ಸೇವಾ ತೆರಿಗೆ ಪಾವತಿಸಬೇಕು ಎಂಬ ಕಸ್ಟಮ್ಸ್‌ ಅಬಕಾರಿ ಮತ್ತು ಸೇವಾ ತೆರಿಗೆಯ ಮೇಲ್ಮನವಿ ನ್ಯಾಯಮಂಡಳಿ ಯ(ಸಿಇಎಸ್‌ಟಿಎಟಿ) ಅಲಹಾಬಾದ್‌ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಎತ್ತಿಹಿಡಿದಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್‌.ಓಕಾ ಮತ್ತು ಉಜ್ಜಲ್‌ ಭುಯಾನ್ ಅವರಿದ್ದ ನ್ಯಾಯಪೀಠ ಈ ಕುರಿತು ಕಳೆದ ಅಕ್ಟೋಬರ್‌ 5ರಂದು ಸಿಇಎಸ್‌ಟಿಎಟಿ ಹೊರಡಿಸಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ‘ಶುಲ್ಕ ಪಡೆದು ಯೋಗ ಶಿಬಿರಗಳನ್ನು ನಡೆಸುವುದು ಸೇವೆ ಎನಿಸುತ್ತದೆ ಎಂಬ ನ್ಯಾಯಮಂಡಳಿಯ ನಿರ್ಣಯ ಸರಿಯಾಗಿಯೇ ಇದೆ. ಈ ಕುರಿತ ಆದೇಶದಲ್ಲಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣ ಕಂಡುಬರುತ್ತಿಲ್ಲ’ ಎಂದು ಅಭಿಪ್ರಾಯಪಟ್ಟ ಪೀಠ ಟ್ರಸ್ಟ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಪತಂಜಲಿ ಯೋಗಪೀಠ ಟ್ರಸ್ಟ್‌ ಆಯೋಜಿಸುವ ಯೋಗ ಶಿಬಿರಗಳು ‘ಆರೋಗ್ಯ ಮತ್ತು ಫಿಟ್ನೆಸ್ ಸೇವೆ’ ಎನಿಸುತ್ತದೆ ಹಾಗೂ ಇದಕ್ಕೆ ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ನ್ಯಾಯಮಂಡಳಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.