ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮ ವಿರುದ್ಧ ನೀಡಲಾದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿರುವ ಗುಜರಾತ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಇದೇ ಪ್ರಕರಣದಲ್ಲಿ ಎಎಪಿ ನಾಯಕ ಸಂಜಯ್ ಸಿಂಗ್ ಸಲ್ಲಿಸಿದ್ದ ಮನವಿಯನ್ನೂ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಹಾಗೂ ಎಸ್.ವಿ.ಎನ್ ಭಟ್ಟಿ ಅವರಿದ್ದ ಪ್ರತ್ಯೇಕ ಪೀಠ ರದ್ದುಗೊಳಿಸಿದೆ.
ನ್ಯಾಯಾಲಯದ ಈ ಆದೇಶವನ್ನು ಉಲ್ಲೇಖಿಸಿದ ನ್ಯಾಯಾಮೂರ್ತಿಗಳಾದ ಹೃಷಿಕೇಶ್ ರಾಯ್ ಹಾಗೂ ಎಸ್.ವಿ.ಎನ್ ಭಟ್ಟಿ ಅವರಿದ್ದ ಪೀಠವು, ‘ಇಬ್ಬರೂ ನಾಯಕರ ಅರ್ಜಿಗಳನ್ನೂ ಒಂದೇ ರೀತಿಯಲ್ಲಿ ನೋಡಬೇಕಾಗುತ್ತದೆ’ ಎಂದು ಹೇಳಿತು.
ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಪದವಿಗಳ ಬಗ್ಗೆ ಪ್ರಶ್ನಿಸಿದ್ದ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಈ ಸಂಬಂಧ ಸೆಷನ್ಸ್ ನ್ಯಾಯಾಲಯ ಸಮನ್ಸ್ ನೀಡಿತ್ತು. ಕೆಳ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸುವಂತೆ ಉಭಯ ನಾಯಕರು (ಸಂಜಯ್ ಸಿಂಗ್ ಹಾಗೂ ಕೇಜ್ರಿವಾಲ್) ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ ಇವರ ಮನವಿಯನ್ನು ಗುಜರಾತ್ ಹೈಕೋರ್ಟ್ ಫೆಬ್ರುವರಿ 16ರಂದು ವಜಾಗೊಳಿಸಿತ್ತು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.