ಜುಲೈ 26: ಇದೇ ದಿನ 21 ವರ್ಷಗಳ ಹಿಂದೆ, ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು ನಮ್ಮ ಯೋಧರು ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು ‘ಕಾರ್ಗಿಲ್ ದಿನ’ವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದು ವಿಜಯೋತ್ಸವದ ಜತೆಗೆ ನಮ್ಮ ಧೀರ ಯೋಧರ ತ್ಯಾಗ ಬಲಿದಾನದ ನೆನಪಿನ ದಿನವೂ ಹೌದು.
ಆಪರೇಷನ್ ವಿಜಯ್
1. ಸಿಯಾಚಿನ್ ನೀರ್ಗಲ್ಲು ಪ್ರದೇಶವು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಅಕ್ಷಾಯಿಚಿನ್ ಪ್ರದೇಶವನ್ನು ಬೇರ್ಪಡಿಸುತ್ತದೆ. ಈ ಎರಡೂ ಪ್ರದೇಶಗಳ ಮಧ್ಯೆ ಸಂಪರ್ಕ ಕಲ್ಪಿಸಲು ಸಿಯಾಚಿನ್ ನೀರ್ಗಲ್ಲಿನ ಇಕ್ಕೆಲಗಳಲ್ಲಿರುವ ಪರ್ವತ–ಕಣಿವೆ ಪ್ರದೇಶದ ಮೇಲಿನ ನಿಯಂತ್ರಣ ಅನಿವಾರ್ಯ. ಜಗತ್ತಿನ ಅತ್ಯಂತ ಎತ್ತರದ ಸೇನಾ ನೆಲೆ ಇರುವ ಪ್ರದೇಶವಿದು. ಭಾರತವು ಈ ಪ್ರದೇಶದ ಮೇಲೆ ನಿಯಂತ್ರಣ ಹೊಂದಿದೆ. ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದೇ ಕಾರ್ಗಿಲ್ ಮೇಲಿನ ಪಾಕಿಸ್ತಾನದ ಅತಿಕ್ರಮಣದ ಹಿಂದಿನ ಉದ್ದೇಶ
2. ಸಿಯಾಚಿನ್ ಮೂಲ ಶಿಬಿರಕ್ಕೆ ಆಹಾರ, ಶಸ್ತ್ರಾಸ್ತ್ರ ಮತ್ತಿತರ ಸಾಮಗ್ರಿಗಳನ್ನು ಶ್ರೀನಗರದಿಂದ ಕಾರ್ಗಿಲ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 1ಡಿ ಮೂಲಕವೇ ಸಾಗಿಸಬೇಕು. ಮೂಲ ಶಿಬಿರದಿಂದ ಈ ಸಾಮಗ್ರಿ ಗಳನ್ನು ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿರುವ ಸೇನಾ ನೆಲೆಗೆ ಹೊತ್ತೊಯ್ಯಬೇಕು
3. ಕಾರ್ಗಿಲ್ ಅನ್ನು ವಶಪಡಿಸಿಕೊಂಡರೆ, ರಾಷ್ಟ್ರೀಯ ಹೆದ್ದಾರಿ 1ಡಿ ಸಹ ತಮ್ಮ ಕೈವಶವಾಗುತ್ತದೆ. ಆಗ ಸಿಯಾಚಿನ್ ಸೇನಾನೆಲೆಗೆ ಎಲ್ಲಾ ಸ್ವರೂಪದ ಪೂರೈಕೆಯನ್ನು ತಡೆಹಿಡಿಯಬಹುದು ಎಂಬುದು ಪಾಕಿಸ್ತಾನದ ಸೇನಾ ಪಡೆಯ ಸಂಚಾಗಿತ್ತು
4. ದ್ರಾಸ್, ಟೈಗರ್ ಹಿಲ್, ಬಟಾಲಿಕ್, ಮುಷ್ಕಿ, ಟುರ್ಟುಕ್ ಮತ್ತು ಕಾರ್ಗಿಲ್‌ನ ಪರ್ವತ
ಪ್ರದೇಶಗಳಲ್ಲಿ ಭಾರತೀಯ ಸೇನೆಯ ಮೂರು ಬೆಟಾಲಿಯನ್‌ಗಳು ಕಾರ್ಯ ನಿರ್ವಹಿಸುತ್ತವೆ. ಗಡಿ ನಿಯಂತ್ರಣ ರೇಖೆಯಿಂದ ಆಚೆಗೆ ಪಾಕ್‌ನ ಪಡೆಗಳೂ ಠಿಕಾಣಿ ಹೂಡಿರುತ್ತವೆ. ಚಳಿಗಾಲದಲ್ಲಿ ವಿಪರೀತ ಹಿಮಪಾತವಾಗುವುದರಿಂದ ಎರಡೂ ಪಡೆಗಳು ಈ ಪ್ರದೇಶಗಳಿಂದ ವಾಪಸ್ ಆಗುತ್ತವೆ. ಬೇಸಿಗೆಯಲ್ಲಿ ಮತ್ತೆ ಗಡಿ ಠಾಣೆಗೆ ಹೋಗುತ್ತವೆ
5. 1999ರ ಮೇನಲ್ಲಿ ಭಾರತೀಯ ಪಡೆಗಳು ಈ ಗಡಿಠಾಣೆಗಳಿಂದ ಹಿಂದಿರುಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನದ ಪಡೆಗಳು ಗಡಿನಿಯಂತ್ರಣ ರೇಖೆಯ ಮೂಲಕ ಭಾರತಕ್ಕೆ ನುಸುಳಿ, ಭಾರತದ 130 ಗಡಿಠಾಣೆಗಳನ್ನು ಆಕ್ರಮಿಸಿದವು.
6. ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಲು ಮತ್ತು ನಮ್ಮ ಪ್ರದೇಶಗಳನ್ನು ಮರುವಶಪಡಿಸಿಕೊಳ್ಳಲು ನಡೆಸಿದ ಸೇನಾ ಕಾರ್ಯಾಚರಣೆಯೇ ‘ಆಪರೇಷನ್ ವಿಜಯ್’. ಇದನ್ನು ಕಾರ್ಗಿಲ್ ಸಂಘರ್ಷ ಎನ್ನಲಾಗುತ್ತದೆ
7. ಪಾಕಿಸ್ತಾನದ ಪಡೆಗಳು ಪರ್ವತಗಳ ಮೇಲಿನ ಗಡಿಠಾಣೆಗಳಲ್ಲಿ ಇದ್ದವು. ಆದರೆ ಭಾರತೀಯ ಸೈನಿಕರು ಕಣಿವೆ ಪ್ರದೇಶದಲ್ಲಿ ಇದ್ದರು. ನಮ್ಮ ಸೈನಿಕರಿಗೆ ಕಾರ್ಯಾಚರಣೆ ಕಠಿಣವಾಗಿತ್ತು. ಹೀಗಾಗಿ ಪಾಕ್ ದಾಳಿಗೆ ನಮ್ಮ ಸೈನಿಕರು ಸುಲಭವಾಗಿ ಬಲಿಯಾದರು
8. ಈ ಕಾರ್ಯಾಚರಣೆಯಲ್ಲಿ ಭಾರತದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಭಾಗಿಯಾಗಿದ್ದವು.
9. ಪಾಕಿಸ್ತಾನಕ್ಕೆ ವಿದೇಶಗಳಿಂದ ಶಸ್ತ್ರಾಸ್ತ್ರ ಪೂರೈಕೆಯನ್ನು ತಡೆಯುವ ಸಲುವಾಗಿ ಭಾರತೀಯ ನೌಕಾಪಡೆ ‘ಆಪರೇಷನ್ ತಲ್ವಾರ್’ ನಡೆಸಿತ್ತು.
ವಿಕ್ರಂ ಬಾತ್ರಾಪರಮವೀರ ಚಕ್ರ (ಮರಣೋತ್ತರ)
ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಜನಿಸಿದ ವಿಕ್ರಂ ಬಾತ್ರಾ ಅವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಕ್ಯಾಪ್ಟನ್. ಕಾಶ್ಮೀರದಲ್ಲಿ ನಡೆದ ಅತ್ಯಂತ ಕ್ಲಿಷ್ಟಕರ ಸೇನಾ ಕಾರ್ಯಾಚಣೆಯಲ್ಲಿ ತಂಡವೊಂದರ ನೇತೃತ್ವ ವಹಿಸಿದ್ದ ಇವರು ‘ಶೇರ್ ಷಾ’ ಎಂದೇ ಹೆಸರಾಗಿದ್ದರು. 5,140 ಮೀಟರ್ ಎತ್ತರದ ಶಿಖರವನ್ನು ವಶಪಡಿಸಿಕೊಳ್ಳುವಲ್ಲಿ ಇವರು ನಿರ್ಣಾಯಕ ಪಾತ್ರ ವಹಿಸಿದ್ದರು. ಕಾರ್ಯಾಚರಣೆಗೂ ಮುನ್ನ ತಮ್ಮ ತಂದೆಗೆ ಕರೆ ಮಾಡಿದ್ದ ಬಾತ್ರಾ, ಬಹುಶಃ ಇದು ತಮ್ಮ ಕೊನೆಯ ಕರೆ ಎಂದಿದ್ದರು.
ಗ್ರೆನೇಡಿಯರ್ ಯೋಗೇಂದ್ರ ಯಾದವ್ಪರಮವೀರ ಚಕ್ರ
1980ರಲ್ಲಿ ಉತ್ತರ ಪ್ರದೇಶದ ಬುಲಂದ್‌ಷಹರ್‌ನಲ್ಲಿ ಜನಿಸಿದ್ದ ಯೋಗೇಂದ್ರ ಸಿಂಗ್ ಯಾದವ್, 16 ವರ್ಷದ 5 ತಿಂಗಳಿನವರಿದ್ದಾಗ ಸೇನೆ ಸೇರಿದ್ದರು. 19ನೇ ವರ್ಷಕ್ಕೆ ಶೌರ್ಯ ಪ್ರಶಸ್ತಿ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಇವರ ತಂದೆ ಕರಣ್ ಯಾದವ್ ಅವರು 1965 ಮತ್ತು 1971ರ ಯುದ್ಧದಲ್ಲಿ ಭಾಗಿಯಾಗಿದ್ದವರು. ‘ಟೈಗರ್ ಹಿಲ್ಸ್‌ನ ಟೈಗರ್’ ಎಂದೇ ಹೆಸರಾಗಿರುವ ಯೋಗೇಂದ್ರ ಅವರ ತಂಡಕ್ಕೆ ಅತಿಮುಖ್ಯವಾದ ಟೈಗರ್ ಹಿಲ್ಸ್ ವಶಪಡಿಸಿಕೊಳ್ಳುವ ಕೆಲಸ ವಹಿಸಲಾಗಿತ್ತು. ಏಳು ಯೋಧರು ಸೇರಿ ಪಾಕ್ ಸೈನಿಕರ 3 ಬಂಕರ್‌ಗಳನ್ನು ನಾಶಪಡಿಸಿ ಸುಮಾರು 40 ಸೈನಿಕರನ್ನು ಹತ್ಯೆ ಮಾಡಿದ್ದರು.
ಮನೋಜ್ ಕುಮಾರ್ ಪಾಂಡೆಪರಮವೀರಚಕ್ರ (ಮರಣೋತ್ತರ)
ಪಾಂಡೆ ಅವರು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯವರು. ಸೇನಾ ಸಮವಸ್ತ್ರ ಧರಿಸುವ ತಮ್ಮ ಕನಸನ್ನು ಗೂರ್ಖಾ ರೈಫಲ್ಸ್ ಸೇರುವ ಮೂಲಕ ನನಸಾಗಿಸಿಕೊಂಡರು. ‘ಏಕೆ ಸೇನೆ ಸೇರುತ್ತೀರಿ’ ಎಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ, ‘ಪರಮವೀರ ಚಕ್ರ ಪಡೆಯಲು’ ಎಂದು ಉತ್ತರಿಸಿದ್ದರು. ಅದರಂತೆಯೇ ಕೆಚ್ಚೆದೆಯಿಂದ ಹೋರಾಡಿ ಪರಮವೀರ ಚಕ್ರ ಪಡೆದರು. ಆದರೆ ಅದನ್ನು ಸ್ವೀಕರಿಸಲು ಅವರೇ ಇರಲಿಲ್ಲ.
ಖಲೂಬರ್ ವಶಪಡಿಸಿಕೊಳ್ಳುವ ಕೆಲಸವನ್ನು ಮನೋಜ್ ನೇತೃತ್ವದ ಟೀಂ ‘ಬಿ’ಗೆ ನೀಡಲಾಗಿತ್ತು. 19 ಸಾವಿರ ಅಡಿ ಎತ್ತರದಲ್ಲಿದ್ದಾಗ ಬೆಟ್ಟದ ಮೇಲಿಂದ ಪಾಕ್ ಸೈನಿಕರು ಗುಂಡಿನ ಮಳೆಗೈದರು. ಎರಡು ಬಂಕರ್‌ಗಳನ್ನು ನಾಶಪಡಿಸಿ ಮೂರನೇ ಬಂಕರ್‌ಗೆ ದಾಳಿಯಿಟ್ಟಾಗಮನೋಜ್ ಅವರ ಕಾಲು, ಭುಜಕ್ಕೆ ಗುಂಡು ತಾಕಿತು. ಛಲ ಬಿಡದ ಅವರು ನಾಲ್ಕನೇ ಬಂಕರ್‌ನತ್ತ ಧಾವಿಸಿದಾಗ ಅವರ ಹಣೆಗೆ ಬುಲೆಟ್ ನುಗ್ಗಿತು. 24ನೇ ವಯಸ್ಸಿನಲ್ಲಿ ಹುತಾತ್ಮರಾದರು.
ರೈಫಲ್‌ಮ್ಯಾನ್ ಸಂಜಯ್ ಕುಮಾರ್ಪರಮವೀರ ಚಕ್ರ
ಸಂಜಯ್ ಕುಮಾರ್ ಅವರು ಹಿಮಾಚಲ ಪ್ರದೇಶದ ಬಿಸಾಲ್‌ಪುರದಲ್ಲಿ 1976ರಲ್ಲಿ ಜನಿಸಿದರು. ಸೇನೆಗೆ ಸೇರಲು ಮೂರು ಬಾರಿ ಮಾಡಿದ ಯತ್ನವೂ ವಿಫಲಗೊಂಡಿತ್ತು. ಅಲ್ಲಿವರೆಗೆ ಅವರು ದೆಹಲಿಯಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದರು. ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ಗೆ ಸೇರ್ಪಡೆಯಾದರು.
ಸಂಜಯ್ ಕುಮಾರ್ ಅವರು ಮುಷ್ಕಿ ಕಣಿವೆಯ 4,875 ಮೀಟರ್ ಎತ್ತರದ ಬೆಟ್ಟವನ್ನು ವಶಕ್ಕೆ ತೆಗೆದುಕೊಳ್ಳುವ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನುಸ್ವಯಂಪ್ರೇರಿತರಾಗಿ ತೆಗೆದುಕೊಂಡಿದ್ದರು. ದಿಢೀರನೆ ಎದುರಾದ ದಾಳಿಯನ್ನು ಎದುರಿಸಿದ ಸಂಜಯ್, ತಮ್ಮ ರಕ್ಷಣೆಯನ್ನೂ ಲೆಕ್ಕಿಸದೆ ವೈರಿಗಳ ಮೇಲೆ ನೇರಾನೇರ ಯುದ್ಧಕ್ಕಿಳಿದರು. ಮೂವರು ಸೈನಿಕರನ್ನು ಹತ್ಯೆ ಮಾಡುವ ವೇಳೆ ತಾವು ಗಾಯಗೊಂಡರು. ಗಾಯ ಲೆಕ್ಕಿಸದೆ ಮುಂದುವರಿದು ಮತ್ತೊಂದು ಸುತ್ತು ದಾಳಿ ನಡೆಸಿದಾಗ ವೈರಿ ಪಡೆಯ ಸೈನಿಕನ ಮೆಷಿನ್ ಗನ್ ಕೈಜಾರಿಬಿದ್ದು, ಆತ ಓಡತೊಡಗಿದ. ಗನ್ ಕೈಗೆತ್ತಿಕೊಂಡ ಸಂಜಯ್ ಕುಮಾರ್ ಸೈನಿಕನಿಗೆ ಗುಂಡು ಹಾರಿಸಿದರು. ಗಾಯಗೊಂಡಿದ್ದರೂ, ಕದನಕಣದಿಂದ ಹಿಂದೆ ಸರಿಯಲು ನಿರಾಕರಿಸಿದ ಅವರ ಶೌರ್ಯ ಇತರರನ್ನು ಹುರಿದುಂಬಿಸಿತ್ತು.
ಅನೂಜ್ ನಯ್ಯರ್ಮಹಾವೀರಚಕ್ರ (ಮರಣೋತ್ತರ)
1975ರಲ್ಲಿ ದೆಹಲಿಯಲ್ಲಿ ಜನಿಸಿದ ಇವರ ತಂದೆ ಎಸ್.ಕೆ. ನಯ್ಯರ್ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರಾಧ್ಯಾಪಕರು. ಸೇನಾ ಶಾಲೆಗೆ ಸೇರಿದ್ದ ಅನೂಜ್ ಪ್ರತಿಭಾವಂತ ವಿದ್ಯಾರ್ಥಿ. ಇವರ ಅಪರಿಮಿತ ಉತ್ಸಾಹವನ್ನು ಕಂಡ ಗಣಿತ ಶಿಕ್ಷಕರು, ‘ಬಂಡಲ್ ಆಫ್ ಎನರ್ಜಿ’ ಎಂದೇ ಕರೆಯುತ್ತಿದ್ದರು.
ಭಾರತೀಯ ಸೇನಾ ಅಕಾಡೆಮಿಯಿಂದ 1997ರಲ್ಲಿ ಪದವಿ ಪಡೆದ ಬಳಿಕ ಜಾಟ್ ರೆಜಿಮೆಂಟ್ ಸೇರಿದರು. ಟೈಗರ್ ಹಿಲ್ಸ್‌ನ ಪಶ್ಚಿಮಕ್ಕಿದ್ದ 4,875 ಮೀಟರ್ ಎತ್ತರದ ಪರ್ವತ ವಶಪಡಿಸಿಕೊಳ್ಳಲು ಅನೂಜ್ ತಂಡಕ್ಕೆ ಸೂಚನೆ ಬಂದಿತು. ವಿಕ್ರಂ ಬಾತ್ರಾ ಹಾಗೂ ಅನೂಜ್ ಅವರ ತಂಡ ಮೇಲಿನಿಂದ ಗುಂಡಿನ ಸುರಿಮಳೆಗೈಯುತ್ತಿದ್ದ ಪಾಕ್ ಪಡೆಯನ್ನು ಲೆಕ್ಕಿಸದೆ ಬೆಟ್ಟ ಏರುವ ನಿರ್ಧಾರ ಮಾಡಿ, ಅದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯೂ ಆಯಿತು.
ರಾಜೇಶ್ ಸಿಂಗ್ ಅಧಿಕಾರಿಮಹಾವೀರಚಕ್ರ (ಮರಣೋತ್ತರ)
ನೈನಿತಾಲ್‌ನಲ್ಲಿ 1970ರಲ್ಲಿ ಜನಿಸಿದ ರಾಜೇಶ್ ಸಿಂಗ್ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದರು.ಟೊಲೊಲಿಂಗ್ ಪರ್ವತದತ್ತ ಹೊರಟಿದ್ದ ರಾಜೇಶ್ ನೇತೃತ್ವದ ತಂಡದ ಮೇಲೆ ವೈರಿ ಪಡೆಯು ಸ್ವಯಂಚಾಲಿತ ಬಂದೂಕುಗಳ ಮೂಲಕ ಗುಂಡು ಹಾರಿಸತೊಡಗಿತು. ಪಟ್ಟು ಬಿಡದ ತಂಡ ಪಾಕ್ ಬಂಕರ್‌ಗೆ ನುಗ್ಗಿ ಇಬ್ಬರನ್ನು ಹತ್ಯೆ ಮಾಡಿತು. ಗುಂಡೇಟು ಬಿದ್ದಿದ್ದರೂ ಹಿಂದೆ ಸರಿಯಲು ಒಪ್ಪದ ರಾಜೇಶ್, ಮೂರನೇ ಬಂಕರ್ ವಶಪಡಿಸಿಕೊಂಡು ಮತ್ತೊಬ್ಬ ಸೈನಿಕನ್ನು ಹತ್ಯೆ ಮಾಡಿದರು. ಯುದ್ಧಭೂಮಿಯಲ್ಲಿ ತೋರಿದ ವೀರಾವೇಶದ ಹೋರಾಟಕ್ಕೆ ಎರಡನೇ ಅತ್ಯುತ್ತಮ ಶೌರ್ಯ ಪ್ರಶಸ್ತಿಯು ಮರಣೋತ್ತರವಾಗಿ ಸಂದಿತು.
ಹನೀಫ್ ಉದ್ದೀನ್‌ವೀರಚಕ್ರ (ಮರಣೋತ್ತರ)
ದೆಹಲಿಯಲ್ಲಿ 1974ರಲ್ಲಿ ಜನಿಸಿದ ಹನೀಫ್ ಉದ್ದೀನ್, ಶಿವಾಜಿ ಕಾಲೇಜಿನಲ್ಲಿ ಅತ್ಯುತ್ತಮ ಗಾಯಕ ಎಂದು ಹೆಸರಾಗಿದ್ದರು. ರಜಪೂತ ರೈಫಲ್ಸ್‌ಗೆ ಸೇರ್ಪಡೆಯಾದ ಬಳಿಕ ಸಿಯಾಚಿನ್, ಲಡಾಕ್‌ನಲ್ಲಿ ನಿಯೋಜಿಸಲಾಗಿತ್ತು. ತಮ್ಮ ಹಾಡುಗಾರಿಕೆ ಮೂಲಕ ತಂಡದ ಉತ್ಸಾಹ ಹೆಚ್ಚಿಸುತ್ತಿದ್ದರು.
18 ಸಾವಿರ ಅಡಿ ಎತ್ತರದ ಟುರ್ಟುಕ್ ಪ್ರದೇಶದಲ್ಲಿ ವೈರಿ ಪಡೆಗಳ ಚಲನವಲನ ಗಮನಿಸಲು ಅಗತ್ಯವಾಗಿದ್ದ ಸ್ಥಳ ತಲುಪಲು ನಾಲ್ವರ ತಂಡ ಹೊರಟಿತು. ಅದರಲ್ಲಿ ಸ್ವಯಂಪ್ರೇರಿತರಾಗಿ ಸೇರ್ಪಡೆಯಾಗಿದ್ದ ಹನೀಫ್, ಎರಡು ರಾತ್ರಿಗಳಲ್ಲಿ ಸಮೀಪದ ಸ್ಥಳ ತಲುಪಿದರು. ಅದರೆ ತಾವು ನಿಗದಿಪಡಿಸಿದ್ದ ಸ್ಥಳಕ್ಕೆ ತೆರಳಿದಾಗ ಕಾಣಿಸಿದ ವೈರಿಗಳ ಮೇಲೆ ಗುಂಡಿನ ಮಳೆಗರೆದರು. ತಮ್ಮ ಸುರಕ್ಷತೆ ಲೆಕ್ಕಿಸದೆ ಗುಂಡು ಹಾರಿಸುವಾಗ ಬಂದೂಕು ಖಾಲಿಯಾಯಿತು. ಎಲ್ಲ ದಿಕ್ಕಿನಿಂದಲೂ ನುಗ್ಗಿದ ವೈರಿಪಡೆಗಳ ಗುಂಡಿಗೆ ಹನೀಫ್ ಬಲಿಯಾದರು. ಆಗ ಅವರ ವಯಸ್ಸು 25 ವರ್ಷ.
ಮರಿಯಪ್ಪನ್ ಶರವಣನ್‌ವೀರಚಕ್ರ (ಮರಣೋತ್ತರ)
ತಮಿಳುನಾಡಿನಲ್ಲಿ 1972ರಲ್ಲಿ ಜನಿಸಿದ್ದ ಶರವಣನ್ ಪ್ರತಿಷ್ಠಿತ ಬಿಹಾರ ರೆಜಿಮೆಂಟ್‌ನ ಯೋಧ. 14 ಸಾವಿರ ಅಡಿ ಎತ್ತರದ ಬಟಾಲಿಕ್ ಪ್ರದೇಶದಲ್ಲಿ ಪಾಕ್ ಸೈನಿಕರ ಜೊತೆ ನಡೆದ ನೇರ ಯುದ್ಧದಲ್ಲಿ ಇಬ್ಬರಿಗೆ ಗುಂಡಿಕ್ಕಿದರು. ರಾಕೆಟ್ ಲಾಂಚರ್‌ನಿಂದ ದಾಳಿಗಿಳಿದಾಗಿ ಶತ್ರುಪಾಳಯದ ಗುಂಡು ಇವರಿಗೆ ತಾಗಿತು. ಹಿಂದೆ ಸರಿಯುವಂತೆ ಕಮಾಂಡರ್ ಸೂಚಿಸಿದರೂ ಪಟ್ಟುಬಿಡದ ಶರವಣನ್ ಮತ್ತೆ ದಾಳಿನಡೆಸಿ, ಮತ್ತಿಬ್ಬರನ್ನು ಬಲಿ ಪಡೆದರು. ಆದರೆ ಈ ಬಾರಿ ಅವರಿಗೆ ತಾಗಿದ ಗುಂಡು ಅವರು ಬದುಕಲು ಬಿಡಲಿಲ್ಲ.
ಅಜಯ್ ಅಹುಜಾವೀರಚಕ್ರ (ಮರಣೋತ್ತರ)
ರಾಜಸ್ಥಾನದ ಕೋಟಾದಲ್ಲಿ 1976ರಲ್ಲಿ ಜನಿಸಿದ ಅಹುಜಾ ಡಿಫೆನ್ಸ್ ಅಕಾಡೆಮಿಯಲ್ಲಿ ಪೈಲಟ್ ತರಬೇತಿ ಪಡೆದು ಭಾರತೀಯ ವಾಯುಪಡೆ ಸೇರಿದರು. ಮಿಗ್–23 ಹಾಗೂ ಮಿಗ್–21 ವಿಮಾನಗಳನ್ನು ಚಲಾಯಿಸಿದ ಅನುಭವ ಇವರದ್ದು. ಪೈಲಟ್‌ಗಳಿಗೆ ತರಬೇತಿ ನೀಡುತ್ತಿದ್ದರು. ಕಾರ್ಗಿಲ್ ಯುದ್ಧ ಘೋಷಣೆಯಾದಾಗ, ಗೋಲ್ಡನ್ ಆ್ಯರೋಸ್ ಸ್ಕ್ವಾಡ್ರನ್ 17 ತಂಡದ ಕಮಾಂಡರ್ ಆಗಿ ಯುದ್ಧಕ್ಕಿಳಿದರು.
ಸಫೇದ್ ಸಾಗರ್ ಕಾರ್ಯಾಚರಣೆಯ ಭಾಗವಾಗಿ ಮಿಗ್ ವಿಮಾನ ಚಲಾಯಿಸುವಾಗ ಹಾರಿ ಬಂದ ಕ್ಷಿಪಣಿಯು ಇವರಿದ್ದ ವಿಮಾನಕ್ಕೆ ಹಾನಿ ಮಾಡಿತು. ರೇಡಿಯೊ ಸಂದೇಶ ನೀಡಿ ಅವರು ವಿಮಾನದಿಂದ ಜಿಗಿದರು. ಅವರು ಸುರಕ್ಷಿತವಾಗಿ ಜಿಗದಿದ್ದರೂ, ಪಾಕ್ ಸೈನಿಕರಿಂದ ಹತರಾಗಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ಫಲಿತಾಂಶ ಹೇಳಿತು.
ಚುನಿ ಲಾಲ್ವೀರ ಚಕ್ರ
1968ರಲ್ಲಿ ಜಮ್ಮುವಿನಲ್ಲಿ ಜನಿಸಿದ ಚುನಿ ಲಾಲ್, ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫ್ಯಾಂಟ್ರಿ ಪಡೆಗೆ ಸೇರ್ಪಡೆಯಾದರು.ಚುನಿಲಾಲ್ ಅವರದ್ದು ಅಪ್ರತಿಮ ಪರಾಕ್ರಮ. ಸಿಯಾಚಿನ್ ಹೋರಾಟ, ಆಪರೇಷನ್ ಮೇಘದೂತ್, ಆಪರೇಷನ್ ರಾಜೀವ್, ಕಾರ್ಗಿಲ್ ಯುದ್ಧ, ಕಾಶ್ಮೀರ ಬಂಡುಕೋರರ ವಿರುದ್ಧ ಹೋರಾಟದಲ್ಲಿ ಅವರು ಸೇನೆಯನ್ನು ಪ್ರತಿನಿಧಿಸಿದ್ದರು.ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೋಮಾಲಿಯಾ, ಸೂಡಾನ್‌ನಲ್ಲಿ ಕೆಲಸ ಮಾಡಿದ್ದಾರೆ. 1999ರಲ್ಲಿ ಜಮ್ಮುವಿನ ಪೂಂಚ್ ವಲಯದಲ್ಲಿ ನಡೆದ ಆಪರೇಷನ್ ರಕ್ಷಕ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಿಂದ ಒಳನುಸುಳುತ್ತಿದ್ದ ಸೇನೆಯನ್ನು ತಡೆದಿದ್ದರು. 12 ಯೋಧರನ್ನು ಹತ್ಯೆಗೈದು, ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ್ದರು. 2007ರಲ್ಲಿ ಕುಪ್ವಾರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗುಂಡೇಟಿಗೆ ಬಲಿಯಾದರು. ಇವರಿಗೆ ಅಶೋಕ ಚಕ್ರ, ವೀರ ಚಕ್ರ ಹಾಗೂ ಸೇನಾ ಪದಕ ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.