ADVERTISEMENT

ಚುನಾಯಿತ ಮಹಿಳಾ ಪ್ರತಿನಿಧಿ ವಜಾ; ಲಘುವಾಗಿ ಪರಿಗಣಿಸಲಾಗದು ಎಂದ ಸುಪ್ರೀಂ ಕೋರ್ಟ್

ಪಿಟಿಐ
Published 6 ಅಕ್ಟೋಬರ್ 2024, 10:03 IST
Last Updated 6 ಅಕ್ಟೋಬರ್ 2024, 10:03 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಚುನಾಯಿತ ಪ್ರತಿನಿಧಿಗಳನ್ನು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯನ್ನು ಪದಚ್ಯುತಿಗೊಳಿಸುವುದನ್ನು ಲಘುವಾಗಿ ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮಹಾರಾಷ್ಟ್ರದ ವಿಚ್ಖೇಡಾ ಗ್ರಾಮದ ಮಹಿಳಾ ಸರಪಂಚ್(ಗ್ರಾಮ ಪಂಚಾಯತಿ ಅಧ್ಯಕ್ಷೆ) ಮನೀಷ್ ರವೀಂದ್ರ ಪಾನ್‌ಪಾಟೀಲ್ ಅವರನ್ನು ಪದಚ್ಯುತಗೊಳಿಸಿದ ಆದೇಶವನ್ನು ರದ್ದುಗೊಳಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.

ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಮನೆಯಲ್ಲಿ ಪಾನ್‌ಪಾಟೀಲ್ ಅವರು ತಮ್ಮ ಅತ್ತೆಯೊಂದಿಗೆ ವಾಸವಾಗಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಸರಪಂಚ್‌ ಸ್ಥಾನದಿಂದ ಪದಚ್ಯುತಗೊಳಿಸಲು ಆದೇಶಿಸಲಾಗಿತ್ತು. ಈ ಆರೋಪಗಳನ್ನು ನಿರಾಕರಿಸಿರುವ ಪಾನ್‌ಪಾಟೀಲ್‌, ನ್ಯಾಯಾಲಯದ ಮೆಟ್ಟಿಲೇರಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ, ಆರೋಪಗಳಿಗೆ ಸಂಬಂಧಿಸಿದಂತೆ ಸತ್ಯ ಪರಿಶೀಲನೆ ಮಾಡದೆ ಆದೇಶ ಹೊರಡಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

‘ಮಹಿಳೆಯೊಬ್ಬರು ತಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಕೆಯ ನಿರ್ದೇಶನಗಳನ್ನು ತಾವು ಪಾಲಿಸಬೇಕು ಎಂಬ ವಾಸ್ತವವನ್ನು ಗ್ರಾಮಸ್ಥರು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಪ್ರಕರಣ ಇದಾಗಿದೆ’ ಎಂದಿದೆ.

‘ಸಾರ್ವಜನಿಕ ಕಚೇರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವಾಗ ಇಂತಹ ನಿದರ್ಶನಗಳು ನಾವು ಸಾಧಿಸಿದ ಮುನ್ನಡೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ತಿಳಿಸಿದೆ.

ಇದೇ ವೇಳೆ ಆಗಸ್ಟ್ 3, 2023ರ ಬಾಂಬೆ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ ನ್ಯಾಯಾಲಯ, ಅಧಿಕಾರವಧಿ ಪೂರ್ಣಗೊಳ್ಳುವವರೆ ಸರಪಂಚ್‌ ಸ್ಥಾನದಲ್ಲಿ ಮುಂದುವರಿಯಲು ಪಾನ್‌ಪಾಟೀಲ್‌ ಅವರಿಗೆ ಅವಕಾಶ ಮಾಡಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.