ನವದೆಹಲಿ: ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಜನಪದ ಗಾಯಕಿ ಶಾರದಾ ಸಿನ್ಹಾ (72) ಅವರು ಮಂಗಳವಾರ ರಾತ್ರಿ ನಿಧನರಾದರು.
ಕ್ಯಾನ್ಸರ್, ಮಯೋಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಅವರು ದೆಹಲಿಯ ‘ಏಮ್ಸ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲಕಾಲ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು.
‘ಕಾರ್ತಿಕ್ ಮಾಸ್ ಇಜೋ ರಿಯಾ’, ‘ಕೋಯಲ್ ಬಿನ್’ ತರಹದ ಜನಪದ ಗೀತೆಗಳು, ‘ಗ್ಯಾಂಗ್ಸ್ ಆಫ್ ವಸೇಪುರ್’ ಹಿಂದಿ ಸಿನಿಮಾದ ‘ತಾರ್ ಬಿಜಿಲಿ’, ‘ಹಮ್ ಆಪ್ಕೆ ಹೈ ಕೌನ್’ ಚಿತ್ರದ ‘ಬಾಬುಲ್’ ಹಾಡುಗಳ ಗಾಯನದಿಂದ ಶಾರದಾ ಅವರು ಛಾಪು ಮೂಡಿಸಿದ್ದರು. ಶಾರದಾ ಅವರನ್ನು ಅಭಿಮಾನಿಗಳು ‘ಬಿಹಾರಿ ಕೋಕಿಲಾ’ ಎಂದು ಕರೆಯುತ್ತಿದ್ದರು.
ಶಾರದಾ ಅವರು ಭೋಜಪುರಿ, ಮೈಥಿಲಿ ಭಾಷೆಯ ಜನಪದ ಗೀತೆಗಳನ್ನು ಹಾಡುತ್ತಿದ್ದರು. ಶಾರದಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
‘ಪ್ರಸಿದ್ಧ ಜಾನಪದ ಗಾಯಕಿ ಶಾರದಾ ಸಿನ್ಹಾ ಜೀ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಮೈಥಿಲಿ ಮತ್ತು ಭೋಜ್‌ಪುರಿ ಜಾನಪದ ಹಾಡುಗಳು ಹಲವು ದಶಕಗಳಿಂದ ಜನಪ್ರಿಯವಾಗಿವೆ. ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ನನ್ನ ಸಂತಾಪಗಳು’ ಎಂದು ಪ್ರಧಾನಿ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಬಿಹಾರಿ ಕೋಕಿಲಾ’ ಎಂದೇ ಖ್ಯಾತರಾದ ಶಾರದಾ ಸಿನ್ಹಾ ಜೀ ಅವರು ಮೈಥಿಲಿ ಮತ್ತು ಭೋಜ್‌ಪುರಿ ಜಾನಪದ ಗೀತೆಗಳನ್ನು ಜನಮಾನಸದಲ್ಲಿ ಜನಪ್ರಿಯಗೊಳಿಸಿದ್ದರು. ಹಿನ್ನೆಲೆ ಗಾಯಕಿಯಾಗಿ ಚಲನಚಿತ್ರ ಜಗತ್ತನ್ನು ಮಂತ್ರಮುಗ್ಧಗೊಳಿಸಿದ್ದರು. ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸುಮಧುರ ಕಂಠದ ಮೂಲಕ ಸಿನ್ಹಾ ಅವರು ಭಾರತೀಯ ಸಂಗೀತಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ನನ್ನ ಸಂತಾಪಗಳು’ ಎಂದು ಗೃಹ ಸಚಿವ ಅಮಿತ್ ಶಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಶಾರದಾ ಸಿನ್ಹಾ ಜೀ ಅವರನ್ನು ಛತ್ ಪೂಜೆ ವೇಳೆ ಕಳೆದುಕೊಂಡಿರುವುದು ಅತ್ಯಂತ ದುಃಖಕರವಾಗಿದೆ’ ಎಂದು ಖ್ಯಾತ ಗಾಯಕ ಸೋನು ನಿಗಮ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.