ADVERTISEMENT

ಮೋದಿ ಕಾರ್ಯಗಳಿಗೆ ಎಸ್‌.ಎಲ್‌. ಭೈರಪ್ಪ ಮೆಚ್ಚುಗೆ: ವಿರೋಧ ಪಕ್ಷಗಳ ನಡೆಗೆ ಟೀಕೆ

ಪಿಟಿಐ
Published 8 ಮೇ 2022, 14:06 IST
Last Updated 8 ಮೇ 2022, 14:06 IST
ಎಸ್‌.ಎಲ್‌. ಭೈರಪ್ಪ
ಎಸ್‌.ಎಲ್‌. ಭೈರಪ್ಪ   

ಥಾಣೆ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುವ ಮೂಲಕ ವಿರೋಧ ಪಕ್ಷಗಳು ನಕಾರಾತ್ಮಕ ಮನಸ್ಥಿತಿಯನ್ನು ಸೃಷ್ಟಿಸುತ್ತಿವೆ ಎಂದು ಲೇಖಕಎಸ್‌.ಎಲ್. ಭೈರಪ್ಪ ಟೀಕಿಸಿದ್ದಾರೆ.

ನಗರದಲ್ಲಿ ನಡೆದ ಸಾಹಿತ್ಯ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅವರು (ಪ್ರತಿಪಕ್ಷಗಳು) ಸಕಾರಾತ್ಮಕವಾಗಿ ಏನನ್ನೂ ಹೇಳುವುದಿಲ್ಲ. ಬದಲಾಗಿ ದೇಶದಲ್ಲಿ ನಕಾರಾತ್ಮಕ ಮನಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಸರ್ಜಿಕಲ್ ಸ್ಟ್ರೈಕ್‌ ಅನ್ನು ಪ್ರಶಂಸಿಸುವ ಬದಲು ದಾಳಿಯ ಬಗ್ಗೆ ಪುರಾವೆಗಳನ್ನು ಕೇಳುವುದು ಎಷ್ಟು ಸರಿ’ ಎಂದು ಭೈರಪ್ಪ ಪ್ರಶ್ನಿಸಿದ್ದಾರೆ.

370ನೇ ವಿಧಿಯ ರದ್ದತಿ ದೇಶದ ಪಾಲಿಗೆ ಪ್ರಮುಖ ಸಂಗತಿಯಾಗಿದೆ. ಆದರೆ, ಪ್ರತಿಪಕ್ಷಗಳು ಇಂತಹ ಒಳ್ಳೆಯ ಸಂಗತಿಗಳನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿಪಕ್ಷಗಳ ಜಾತ್ಯತೀತತೆಯು ಕೇವಲ ‘ಜಾತಿವಾದಿ ರಾಜಕಾರಣ’ದಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ.

ADVERTISEMENT

‘ಗುಜರಾತ್ ಹೊರತುಪಡಿಸಿ ಇತರೆ ಬಹುತೇಕ ರಾಜ್ಯಗಳಲ್ಲಿ ಜಾತಿ ರಾಜಕೀಯವನ್ನು ನೋಡಬಹುದಾಗಿದೆ. ಗುಜರಾತಿನಲ್ಲಿ ಯಾವುದೇ ಜಾತಿ ರಾಜಕಾರಣವಿಲ್ಲ. ಆದ್ದರಿಂದಲೇ ಆ ರಾಜ್ಯ ಹೆಚ್ಚು ಅಭಿವೃದ್ಧಿ ಸಾಧಿಸಿದ್ದು, ನರೇಂದ್ರ ಮೋದಿಯಂತಹ ಸಾಮಾನ್ಯ ವ್ಯಕ್ತಿ ಮೂರು ಅವಧಿಗೆ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು’ಎಂದು ಭೈರಪ್ಪ ಬಣ್ಣಿಸಿದ್ದಾರೆ.

25 ಕಾದಂಬರಿಗಳನ್ನು ರಚಿಸಿರುವ ಭೈರಪ್ಪ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.