ನವದೆಹಲಿ: ‘ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸದ ಕಾಂಗ್ರೆಸ್‌ನ ಆಡಳಿತ ವೈಫಲ್ಯವೇ ಮಣಿಪುರದಲ್ಲಿನ ಇಂದಿನ ಈ ಸಮಸ್ಯೆಗೆ ಕಾರಣ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿರುಗೇಟು ನೀಡಿದ್ದಾರೆ.
ಮಣಿಪುರದ ವಿಷಯವನ್ನು ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಪ್ರವೇಶಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ನಡ್ಡಾ, ‘ಮಣಿಪುರದ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ಸುಳ್ಳು ಹೇಳಿಕೆಗಳ ಮೂಲಕ ಹಿಂಸಾಚಾರವನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಆದರೆ ಘಟನೆ ನಡೆದ ಮೊದಲ ದಿನದಿಂದಲೇ ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಲೇ ಇದೆ’ ಎಂದಿದ್ದಾರೆ.
‘ವಿದೇಶಿ ನುಸುಳುಕೋರರಿಗೆ ದೇಶ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿರುವ ಕಾಂಗ್ರೆಸ್, ಇದಕ್ಕೆ ಸಂಬಂಧಿಸಿದಂತೆ ಅಂದಿನ ಗೃಹ ಸಚಿವ ಪಿ. ಚಿದರಂಬರಂ ಅವರು ಒಪ್ಪಂದಕ್ಕೂ ಸಹಿ ಹಾಕಿದ್ದನ್ನು ಖರ್ಗೆ ಮರೆತಂತಿದೆ. ಭಾರತವನ್ನು ಪ್ರವೇಶಿಸುವ ಮೂಲಕ ತಮ್ಮ ದೇಶದಲ್ಲಿ ಬಂಧಕ್ಕೊಳಗಾಗುವ ಅಪಾಯದಿಂದ ಪಾರಾಗುತ್ತಿದ್ದ ಈ ಕಾಂಗ್ರೆಸ್ ಪರಿಚಿತ ಉಗ್ರಗಾಮಿಗಳು, ಇಲ್ಲಿಯೂ ಅದನ್ನೇ ಮುಂದುವರಿಸಿದರು. ಇದು ಭಾರತದೊಳಗಿನ ಸುರಕ್ಷತೆ ಮತ್ತು ಆಡಳಿತದಲ್ಲಿ ಆಗಿರುವ ಅತಿ ದೊಡ್ಡ ವೈಫಲ್ಯ. ತಮಗೆ ಸಿಕ್ಕ ಅವಕಾಶದಿಂದಾಗಿ ಮಣಿಪುರದಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯವನ್ನು ಭಯೋತ್ಪಾದಕರು ನಿರಂತರವಾಗಿ ಮುಂದುವರಿಸಿದರು. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ’ ಎಂದು ಆರೋಪಿಸಿದ್ದಾರೆ.
‘ಮಣಿಪುರದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸುವಂತೆ ಮಾಡುವಲ್ಲಿ ಇಡೀ ಸರ್ಕಾರಿ ಯಂತ್ರವನ್ನೇ ನಿಯೋಜಿಸಲಾಗಿದೆ. ರಾಜ್ಯದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಲು ಬಿಜೆಪಿ ಬದ್ಧ’ ಎಂದು ನಡ್ಡಾ ಹೇಳಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಈಶಾನ್ಯ ರಾಜ್ಯಗಳ ಆರ್ಥಿಕತೆ, ಭದ್ರತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದೆ. ಡಬಲ್ ಎಂಜಿನ್ ಸರ್ಕಾರ ರಚನೆ ಮೂಲಕ ಪಕ್ಷದ ಆಡಳಿತವನ್ನು ಈ ಭಾಗದ ಜನ ಒಪ್ಪಿ ಬೆಂಬಲಿಸಿದ್ದಾರೆ’ ಎಂದಿದ್ದಾರೆ.
‘2013ರಿಂದ 2022ರವರೆಗೆ ಮಣಿಪುರದಲ್ಲಿ ಬಡತನ ರೇಖೆಯು ಶೇ 20ರಷ್ಟು ಕಡಿಮೆಯಾಗಿದೆ. ಹೀಗಿದ್ದರೂ ನಿಮ್ಮ ರಾಜಕೀಯ ದುರಾಸೆ ಹಾಗೂ ಕೆಟ್ಟ ಉದ್ದೇಶಗಳಿಗಾಗಿ ಈಶಾನ್ಯ ರಾಜ್ಯಗಳ ಜನರನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಆಡಳಿತದಲ್ಲೇ ಮಣಿಪುರವು ಅತ್ಯಂತ ರಕ್ತಸಿಕ್ತ ದಿನಗಳನ್ನು ಕಳೆದಿವೆ ಎಂಬ ಇತಿಹಾಸವನ್ನು ಖರ್ಗೆ ಅವರಿಗೆ ನೆನಪಿಸುತ್ತೇನೆ’ ಎಂದು ನಡ್ಡಾ ಹೇಳಿದ್ದಾರೆ.
‘90ರ ದಶಕದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಸಾವಿರಾರು ಜನರು ಮೃತಪಟ್ಟು, ಲಕ್ಷಾಂತರ ಜನ ಸ್ಥಳಾಂತರಗೊಂಡರು. 2011ರಲ್ಲಿ ಸುಮಾರು 120 ದಿನಗಳಿಗೆ ರಾಜ್ಯ ಸ್ತಬ್ಧವಾಯಿತು. ಪೆಟ್ರೋಲ್ ಹಾಗೂ ಎಲ್‌ಪಿಜಿಗೆ ದೇಶದಲ್ಲಿರುವ ಬೆಲೆಗಿಂತ ನಾಲ್ಕು ಪಟ್ಟು ಹಣ ನೀಡಬೇಕಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ಹಣ ನಷ್ಟವಾಗಿದೆ. ಇಷ್ಟು ಮಾತ್ರವಲ್ಲ ಮಣಿಪುರದಲ್ಲಿ ಸಾವಿರಕ್ಕೂ ಹೆಚ್ಚು ನಕಲಿ ಎನ್‌ಕೌಂಟರ್ ನಡೆಸಲಾಗಿದೆ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.