ನವದೆಹಲಿ: ಗಣರಾಜ್ಯೋತ್ಸವದ ಮುನ್ನಾ ದಿನವಾದ ಗುರುವಾರ 1,132 ಪೊಲೀಸ್ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಮತ್ತು ಸೇವಾ ಪದಕಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರಲ್ಲಿ 277 ಶೌರ್ಯ ಪ್ರಶಸ್ತಿಗಳು ಒಳಗೊಂಡಿವೆ.
ಪೊಲೀಸ್, ಅಗ್ನಿಶಾಮಕ ಸೇವೆ, ಗೃಹ ರಕ್ಷಕ, ನಾಗರಿಕರ ರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಶೌರ್ಯ ಪ್ರಶಸ್ತಿ ಮತ್ತು ಸೇವಾ ಪದಕಗಳನ್ನು ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
277 ಶೌರ್ಯ ಪ್ರಶಸ್ತಿಗಳ ಪೈಕಿ 119 ಅನ್ನು ಎಡಪಂಥೀಯ ಉಗ್ರಗಾಮಿ ಸಂಘಟನೆಗಳ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಗೆ ಹಾಗೂ 133 ಪ್ರಶಸ್ತಿಗಳು ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಸಿಬ್ಬಂದಿಗೆ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ವಿಶ್ವ ಸಂಸ್ಥೆಯ ಶಾಂತಿಪಾಲನಾ ಕಾರ್ಯದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಸನ್ವಾಲಾ ರಾಮ್ ವಿಷ್ಣೋಯ್ ಮತ್ತು ಶಿಶುಪಾಲ್ ಸಿಂಗ್ ಅವರಿಗೆ ಶೌರ್ಯಕ್ಕಾಗಿ ಮರಣೋತ್ತರವಾಗಿ ರಾಷ್ಟ್ರಪತಿ ಪದಕ (ಪಿಎಂಜಿ) ಲಭಿಸಿದೆ.
ಈ ಬಾರಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಗೆ ಗರಿಷ್ಠ ಅಂದರೆ 72 ಶೌರ್ಯ ಪ್ರಶಸ್ತಿಗಳು ಲಭಿಸಿವೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 65, ಮಹಾರಾಷ್ಟ್ರದ 18, ಛತ್ತೀಸಗಢದ 26, ಜಾರ್ಖಂಡ್‌ನ 23, ಒಡಿಶಾದ 15, ದೆಹಲಿಯ ಎಂಟು ಸಿಬ್ಬಂದಿ ಹಾಗೂ ಸಶಸ್ತ್ರ ಸೀಮಾ ಬಾಲ್‌ನ 15 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.