ADVERTISEMENT

75ನೇ ಗಣರಾಜ್ಯೋತ್ಸವ ಸಂಭ್ರಮ: ಸಾಂಸ್ಕೃತಿಕ ವಿವಿಧತೆ ಸಾರಿದ ಸ್ತಬ್ಧಚಿತ್ರಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜನವರಿ 2024, 11:03 IST
Last Updated 26 ಜನವರಿ 2024, 11:03 IST
<div class="paragraphs"><p>ನವದೆಹಲಿಯಲ್ಲಿ ಇಂದು ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ (ಬಾಲರಾಮ) ಕಲ್ಪನೆಯಲ್ಲಿ ಚಿತ್ರಿಸಿದ ಸ್ತಬ್ಧಚಿತ್ರ ಗಮನ ಸೆಳೆಯಿತು. </p></div>

ನವದೆಹಲಿಯಲ್ಲಿ ಇಂದು ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ (ಬಾಲರಾಮ) ಕಲ್ಪನೆಯಲ್ಲಿ ಚಿತ್ರಿಸಿದ ಸ್ತಬ್ಧಚಿತ್ರ ಗಮನ ಸೆಳೆಯಿತು.

   

–ಪಿಟಿಐ ಚಿತ್ರ

ನವದೆಹಲಿ: ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷತೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯ ಅತಿಥಿ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್‌ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಇಂದು (ಶುಕ್ರವಾರ) ನಡೆದ ದೇಶದ 75ನೇ ಗಣರಾಜ್ಯೋತ್ಸವದಲ್ಲಿ ದೇಶದ ಸೇನಾ ಸಾಮರ್ಥ್ಯ, ನಾರಿ ಶಕ್ತಿ ಹಾಗೂ ಶ್ರೀಮಂತ ಸಂಸ್ಕೃತಿ ಅನಾವರಣಗೊಂಡಿತು.‌

ADVERTISEMENT

ಈ ಬಾರಿ ಗಣರಾಜ್ಯೋತ್ಸವ ಪರೇಡ್ ಥೀಮ್ ‘ವಿಕಸಿತ ಭಾರತ’ ಮತ್ತು ‘ಭಾರತ್-ಲೋಕತಂತ್ರ ಕಿ ಮಾತೃಕಾ’ ಆಗಿದೆ.

ಈ ಬಾರಿ ಮೆರವಣಿಗೆಯಲ್ಲಿ ದೇಶದ ಸಾಂಸ್ಕೃತಿಕ ವಿವಿಧತೆ ಸಾರುವ ವಿವಿಧ ರಾಜ್ಯಗಳ 16 ಮತ್ತು ಕೇಂದ್ರದ ವಿವಿಧ ಸಚಿವಾಲಯಗಳ 10 ಸೇರಿ ಒಟ್ಟು 26 ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.

ಅರುಣಾಚಲ ಪ್ರದೇಶ, ಹರಿಯಾಣ, ಮಣಿಪುರ, ಮಧ್ಯಪ್ರದೇಶ, ಒಡಿಶಾ, ಚತ್ತೀಸಗಢ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಲಡಾಖ್, ತಮಿಳುನಾಡು, ಗುಜರಾತ್, ಮೇಘಾಲಯ, ಜಾರ್ಖಂಡ್, ಉತ್ತರಪ್ರದೇಶ ಹಾಗೂ ತೆಲಂಗಾಣದ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ (ಬಾಲರಾಮ) ಕಲ್ಪನೆಯಲ್ಲಿ ಚಿತ್ರಿಸಿದ ಸ್ತಬ್ಧಚಿತ್ರ ಮೆರವಣಿಗೆಯು ಗಮನ ಸೆಳೆಯಿತು. ಹಾಗೆಯೇ ತಮಿಳುನಾಡು, ಆಂಧ್ರಪ್ರದೇಶ ಸೇರಿ ದೇಶದ ಹಲವು ರಾಜ್ಯಗಳ ಸ್ತಬ್ಧಚಿತ್ರಗಳು ದೇಶದ ವಿವಿಧತೆಯನ್ನು, ನಾರಿಶಕ್ತಿ, ದೇಶದ ರಕ್ಷಣಾ ಬಲ, ಕಲೆ, ಸಂಸ್ಕೃತಿಯನ್ನು ಸಾರಿದವು. ಇದೇ ವೇಳೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಹಾಗೂ ಕೇಂದ್ರ ಚುನಾವಣೆ ಆಯೋಗದ ಸ್ತಬ್ಧಚಿತ್ರಗಳು ಕೂಡ ಆಕರ್ಷಣೀಯವಾಗಿದ್ದವು.

ಕೇಂದ್ರಾಡಳಿತ ಪ್ರದೇಶಗಳು ಹಾಗೂ 30 ರಾಜ್ಯಗಳು ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವುದಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ‘ಈ ಪೈಕಿ ಕೇಂದ್ರಾಡಳಿತ ಪ್ರದೇಶಗಳು ಹಾಗೂ 16 ರಾಜ್ಯಗಳ ಸ್ತಬ್ಧಚಿತ್ರಗಳು ಮಾತ್ರವೇ ಮೆರವಣಿಗೆಯಲ್ಲಿ ಭಾಗವಹಿಸಲು ಆಯ್ಕೆಯಾಗಿವೆ’ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.