ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ತಿರುಚಿದ ಪ್ರಕರಣದ ಸಂಬಂಧ ಬಂಧನದಲ್ಲಿರುವ ಟಿವಿ ವೀಕ್ಷಕರ ಸಂಶೋಧನಾ ಮಂಡಳಿಯ (ಬಾರ್ಕ್) ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾ ಅವರಿಗೆ ಬಾಂಬೆ ಹೈ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಎರಡು ಭದ್ರತಾ ಠೇವಣಿಗಳನ್ನು ಇಡುವಂತೆ ನ್ಯಾಯಮೂರ್ತಿ ಪಿ.ಡಿ.ನಾಯಕ್ ಅವರು ಸೂಚಿಸಿದ್ದು, ಆರೋಪಿ ದಾಸ್‌ಗುಪ್ತಾ (55) ಅವರಿಗೆ ಜಾಮೀನು ಮಂಜೂರು ಮಾಡಿದರು.
ಟಿಆರ್‌ಪಿ ಹಗರಣದಲ್ಲಿ ಜಾಮೀನು ನೀಡುವಂತೆ ದಾಸ್‌ಗುಪ್ತಾ ಸಲ್ಲಿಸಿದ್ದ ಮನವಿಯನ್ನು ಸೆಷನ್ಸ್ ಕೋರ್ಟ್ ತಿರಸ್ಕರಿಸಿತ್ತು. ಹಗರಣದಲ್ಲಿ ಪ್ರಮುಖ ಪಾತ್ರವಹಿಸಿರಬಹುದು ಎಂಬ ಅಂಶವನ್ನು ಉಲ್ಲೇಖಿಸಿತ್ತು. ಕಳೆದ ವರ್ಷ ಡಿಸೆಂಬರ್ 24 ಅವರನ್ನು ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದರು. ಅಂದಿನಿಂದ ಜೈಲಿನಲ್ಲಿದ್ದು, ಜನವರಿಯಲ್ಲಿ ಜಾಮೀನು ಕೋರಿ ಹೈ ಕೋರ್ಟ್ ಮೊರೆ ಹೋಗಿದ್ದರು.
ಟಿಆರ್‌ಪಿ ತಿರುಚುವುದಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಚಾನೆಲ್‌ಗಳ ಒಡೆತನದ ಎಆರ್‌ಜಿ ಔಟ್‌ಲೈಯರ್ ಮೀಡಿಯಾ ಮತ್ತು ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಜೊತೆಗೆ ಕೈಜೋಡಿಸಿರುವುದು, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವನ್ನು ದಾಸ್‌ಗುಪ್ತಾ ಎದುರಿಸುತ್ತಿದ್ದಾರೆ.
ಯಾವುದೇ ತಪ್ಪು ಕಾರ್ಯದಲ್ಲಿ ಭಾಗಿಯಾಗಿಲ್ಲ ಎಂದು ರಿಪಬ್ಲಿಕ್ ಟಿವಿ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.