ರಾಂಚಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಜಾರ್ಖಂಡ್‌ಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಕೊಡಬೇಕಿರುವ ₹1.36 ಲಕ್ಷ ಕೋಟಿ ಕಲ್ಲಿದ್ದಲು ಬಾಕಿಯನ್ನು ಪಾವತಿಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಅಮಿತ್ ಶಾ ಅವರು ನ.3ರಂದು (ಭಾನುವಾರ) ಜಾರ್ಖಂಡ್‌ನಲ್ಲಿ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನ.4ರಂದು ಪ್ರಧಾನಿ ಮೋದಿ ಅವರು ಎರಡು ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
‘ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಜಾರ್ಖಂಡ್‌ಗೆ ಬರುತ್ತಿದ್ದಾರೆ. ರಾಜ್ಯಕ್ಕೆ ನೀಡಬೇಕಾದ ₹1.36 ಲಕ್ಷ ಕೋಟಿ ಕಲ್ಲಿದ್ದಲು ಬಾಕಿಯನ್ನು ಪಾವತಿಸುವಂತೆ ನಾನು ಮತ್ತೊಮ್ಮೆ ಅವರಲ್ಲಿ ಕೈ ಜೋಡಿಸಿ ವಿನಂತಿಸುತ್ತೇನೆ. ಈ ಹಣವು ಜಾರ್ಖಂಡ್‌ನ ಅಭಿವೃದ್ಧಿ ಅವಶ್ಯಕವಾಗಿದೆ. ರಾಜ್ಯಕ್ಕೆ ಬರಬೇಕಿರುವ ಬಾಕಿ ಮೊತ್ತವನ್ನು ಪಡೆಯಲು ಸಹಾಯ ಮಾಡುವಂತೆ ಬಿಜೆಪಿ ಸಂಸದರು, ನಾಯಕರಲ್ಲೂ ಮನವಿ ಮಾಡುತ್ತೇನೆ’ ಎಂದು ಸೊರೇನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ಘೋಷಣೆ ಆಗುವುದಕ್ಕೂ ಮುನ್ನವೇ ಪತ್ರ ಮೋದಿಗೆ ಪತ್ರ ಬರೆದಿದ್ದ ಸೊರೇನ್, ‘ಇದು ರಾಜ್ಯದ ಅಭಿವೃದ್ಧಿಗೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡುತ್ತಿದೆ. ನಾನು ವಿಶೇಷ ಬಜೆಟ್ ಕೇಳುತ್ತಿಲ್ಲ. ಆದರೆ, ರಾಜ್ಯಕ್ಕೆ ಬರಬೇಕಾದ ಬಾಕಿ ಹಣವನ್ನು ನೀಡುವಂತೆ ಕೋರುತ್ತಿರುವೆ’ ಎಂದಿದ್ದರು.
‘ಸುಪ್ರೀಂ ಕೋರ್ಟ್‌ನ ಸೂಚನೆ ಬಳಿಕವೂ ಕಲ್ಲಿದ್ದಲು ಕಂಪನಿಗಳು ಬಾಕಿ ಹಣ ಪಾವತಿಸಿಲ್ಲ. ನಿಮ್ಮ ಕಚೇರಿ, ಹಣಕಾಸು ಸಚಿವಾಲಯ, ನೀತಿ ಆಯೋಗವೂ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈ ಕುರಿತಂತೆ ಪ್ರಶ್ನಿಸಲಾಗಿದೆ. ಆದರೆ ಇಲ್ಲಿಯವರೆಗೂ ಹಣ ಪಾವತಿಯಾಗಿಲ್ಲ’ ಎಂದೂ ಉಲ್ಲೇಖಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.