ಬೆಂಗಳೂರು: ‘ನಾನು ಗ್ರೀಸ್‌ನಿಂದ ನೇರವಾಗಿ ಇಲ್ಲಿಗೆ ಬಂದಿಳಿದೆ. ದೂರದ ಪ್ರಯಾಣದ ಕಾರಣದಿಂದ ಬಂದಿಳಿಯುವ ಸಮಯದ ಬಗ್ಗೆ ಖಾತರಿ ಇರಲಿಲ್ಲ. ಆದ್ದರಿಂದ ಸ್ವಾಗತ ಕೋರಲು ಬರುವುದು ಬೇಡ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಎಚ್‌ಎಎಲ್ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಸೇರಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು ‘ಯಾವ ಸಮಯಕ್ಕೆ ತಲುಪುತ್ತೇನೆ ಎಂಬುದು ಖಾತರಿ ಇರಲಿಲ್ಲ. ಇಷ್ಟೊಂದು ಬೆಳಿಗ್ಗೆ ಸ್ವಾಗತಿಸಲು ಬರುವ ತೊಂದರೆಯನ್ನು ಅವರು ತೆಗೆದುಕೊಳ್ಳುವುದು ಬೇಡ ಎಂಬ ಭಾವನೆ ನನ್ನದು. ಆ ಕಾರಣದಿಂದ ಬರುವುದು ಬೇಡ ಎಂದಿದ್ದೆ’ ಎಂದರು.
‘ನನ್ನ ಔಪಚಾರಿಕ ಭೇಟಿಯ ಸಂದರ್ಭಗಳಲ್ಲಿ ಮಾತ್ರವೇ ಶಿಷ್ಟಾಚಾರ ಪಾಲಿಸಿದರೆ ಸಾಕು ಎಂದು ಹೇಳಿದ್ದೆ. ನನ್ನ ಮನವಿಯನ್ನು ಅವರೆಲ್ಲರೂ ಪುರಸ್ಕರಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದರು.
ಕಾತರದಿಂದ ಕಾದಿದ್ದ ಜನರು: ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೊರಟ ಪ್ರಧಾನಿ ರಸ್ತೆ ಮಾರ್ಗವಾಗಿ ಪೀಣ್ಯದ ಇಸ್ರೊ ಟೆಲಿಮೆಟ್ರಿ ಕೇಂದ್ರ ತಲುಪಿದರು. ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ನ ಒಳ ಭಾಗದಲ್ಲಿ ನೂರಾರು ಮಂದಿ ಸಾರ್ವಜನಿಕರು ಪ್ರಧಾನಿಯನ್ನು ಸ್ವಾಗತಿಸಲು ಕಾದಿದ್ದರು. ತೆರೆದ ವಾಹನದಲ್ಲಿ ಕೈಬೀಸುತ್ತಾ ಮೋದಿ ಸಾಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.