ಮುಂಬೈ: ಮಹಾರಾಷ್ಟ್ರದ ಪ್ರವಾಹ ಪೀಡಿತ ಸಾಂಗ್ಲಿ ಜಿಲ್ಲೆಯಲ್ಲಿ ರಕ್ಷಣಾ ದೋಣಿ ಮುಳುಗಿ 9 ಮಂದಿ ಸಾವಿಗೀಡಾದ ಘಟನೆ ಗುರುವಾರ ನಡೆದಿದೆ.ಖಾಸಗಿ ರಕ್ಷಣಾ ದೋಣಿಯೊಂದು 30-31 ಜನರನ್ನು ರಕ್ಷಿಸಿ ಕರೆತರುತ್ತಿದ್ದಾಗ ಪಾಲಸ್ ತೆಹಸಿಲ್‌ನಲ್ಲಿರುವ ಬ್ರಹ್ಮಾನಲ್ ಗ್ರಾಮದ ಪಕ್ಕ ಈ ದುರಂತ ಸಂಭವಿಸಿದೆ ಎಂದು ಪುಣೆ ವಿಭಾಗೀಯ ಆಯುಕ್ತ ದೀಪಕ್ ಮೈಸೇಕರ್ ಹೇಳಿದ್ದಾರೆ.
ಇಲ್ಲಿಯವರೆಗೆ 9 ಮೃತದೇಹಗಳನ್ನು ಮೇಲೆತ್ತಲಾಗಿದೆ. ದೋಣಿ ಮಗಚಿದಾಗ ಸುಮಾರು 15 ಮಂದಿ ಈಜಿ ದಡ ಸೇರಿದ್ದಾರೆ ಎಂದು ಮೈಸೇಕರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಗಳು ನಾಪತ್ತೆಯಾದವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.ಕೃಷ್ಣಾ ನದಿಯ ತೀರದಲ್ಲಿ ಬ್ರಹ್ಮಾನಲ್ ಗ್ರಾಮವಿದೆ.
ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 1.32 ಲಕ್ಷ ಮಂದಿಯನ್ನು ಸುರಕ್ಷಿತ ಕೇಂದ್ರಗಳಿಗೆ ವರ್ಗಾವಣೆ ಮಾಡಲಾಗಿದೆ. ಕೊಲ್ಹಾಪುರ್ ಮತ್ತು ಸಾಂಗ್ಲಿ ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಿದ್ದು, ರಸ್ತೆಗಳು ಸಂಪೂರ್ಣ ಮುಳುಗಿ ಹೋಗಿವೆ.
ಪಶ್ಚಿಮ ಜಿಲ್ಲೆಗಳು, ಪುಣೆ, ಸತಾರ ಮತ್ತು ಕೊಲ್ಹಾಪುರದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಪಶ್ಚಿಮ ಮಹಾರಾಷ್ಟ್ರದ ಐದು ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು,16 ಮಂದಿ ಪ್ರಾಣಕಳೆದುಕೊಂಡಿದ್ದಾರೆ ಎಂದಿದ್ದಾರೆ ದಿಲೀಪ್.
ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಏರ್ ಲಿಫ್ಟ್ ಮಾಡುವುದಕ್ಕಾಗಿ ಗೋವಾದಿಂದ ನೌಕಾ ಪಡೆ ಕೊಲ್ಹಾಪುರ್‌ಗೆಬಂದಿದೆ.
ಬುಧವಾರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಸಚಿವ ಸಂಪುಟ ಹಾಗೂ ಜಿಲ್ಲಾಧಿಕಾರಿಗಳ ಸಭೆ ಕರೆದು ಪ್ರವಾಹ ಬಗ್ಗೆ ಅವಲೋಕನ ಸಭೆ ನಡೆಸಿದ್ದಾರೆ. ಜಲಾಶಯಗಳಿಂದ ಹೊರ ಬಿಡುವ ನೀರಿನ ಪ್ರಮಾಣದ ಮಾಹಿತಿಯನ್ನು ನಿರಂತರವಾಗಿ ತಿಳಿಸುತ್ತಿರಬೇಕು ಎಂದು ಫಡಣವಿಸ್ ಜಲಸಂಪನ್ಮೂಲ ಇಲಾಖೆಗೆ ಆದೇಶಿಸಿದ್ದಾರೆ.
ಆಗಸ್ಟ್ 10 ಮತ್ತು 11ನೇ ತಾರೀಖಿನ ಹೊತ್ತಿಗೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.