ಉತ್ತರಕಾಶಿ (ಉತ್ತರಖಂಡ): ಇಲ್ಲಿನ ಸಿಲ್ಕ್ಯಾರಾ ಸುರಂಗದೊಳಗೆ ಕಳೆದ 10 ದಿನಗಳಿಂದ ಸಿಲುಕಿಕೊಂಡಿರುವ ಕಾರ್ಮಿಕರ ಮೊದಲ ವಿಡಿಯೊವನ್ನು ರಕ್ಷಣಾ ಸಿಬ್ಬಂದಿ ಇಂದು ಬಿಡುಗಡೆ ಮಾಡಿದ್ದಾರೆ.
ಸುರಂಗದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರ ರಕ್ಷಣೆಗಾಗಿ ಹಲವು ರೀತಿಯ ಪ್ರಯತ್ನ ಮಾಡಲಾಗುತ್ತಿದ್ದು, ಸೋಮವಾರ ಅವಶೇಷಗಳಡಿ ರಂಧ್ರ ಕೊರೆದ ರಕ್ಷಣಾ ಸಿಬ್ಬಂದಿ, ಆರು ಇಂಚು ವ್ಯಾಸದ ಪೈಪ್ ಅನ್ನು ಯಶಸ್ವಿಯಾಗಿ ಅಳವಡಿಸಿದ್ದರು.
ಆಹಾರವನ್ನು ಪೂರೈಸಲು ಅಳವಡಿಸಲಾಗಿದ್ದ ಈ 6 ಇಂಚಿನ ಪೈಪ್‌ಲೈನ್ ಮೂಲಕ ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ಕಳುಹಿಸಿದ್ದು, ಸುರಂಗದೊಳಗಿನ ದೃಶ್ಯಗಳನ್ನು ಕ್ಯಾಮೆರಾ ಸೆರೆಹಿಡಿದಿದೆ.
ಕಾರ್ಮಿಕರು ಹಳದಿ ಮತ್ತು ಬಿಳಿ ಹೆಲ್ಮೆಟ್‌ಗಳನ್ನು ಧರಿಸಿದ್ದು, ಪೈಪ್‌ಲೈನ್ ಮೂಲಕ ಕಳುಹಿಸಿದ ಆಹಾರಗಳನ್ನು ತೆಗೆದುಕೊಳ್ಳುತ್ತಿರುವುದು, ಪರಸ್ಪರ ಮಾತನಾಡಿಕೊಳ್ಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊ ನೋಡಿದ ಕಾರ್ಮಿಕರ ಕುಟುಂಬಸ್ಥರು ನಿಟ್ಟುಸಿರುವ ಬಿಟ್ಟಿದ್ದಾರೆ.
ಕೇಂದ್ರ ಸರ್ಕಾರದ ಚಾರ್‌ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಸುರಂಗ ನಿರ್ಮಿಸುತ್ತಿದ್ದ ವೇಳೆ ಭೂಕುಸಿತ ಸಂಭವಿಸಿ ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.