ADVERTISEMENT

ಫಲಾನುಭವಿಗಳು ಬಯಸುವ ತನಕ ಮೀಸಲಾತಿ ಮುಂದುವರಿಯಬೇಕು: ಆರ್‌ಎಸ್‌ಎಸ್‌

ಪಿಟಿಐ
Published 9 ಸೆಪ್ಟೆಂಬರ್ 2019, 14:43 IST
Last Updated 9 ಸೆಪ್ಟೆಂಬರ್ 2019, 14:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಷ್ಕರ್‌ (ರಾಜಸ್ಥಾನ): ನಮ್ಮ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇರುವುದರಿಂದ ಮೀಸಲಾತಿಯ ಅಗತ್ಯ ಇದೆ. ಮೀಸಲಾತಿ ಎಲ್ಲಿಯವರೆಗೆ ಬೇಕು ಎಂದು ಫಲಾನುಭವಿಗಳು ಬಯಸುತ್ತಾರೆಯೋ ಅಲ್ಲಿಯವರೆಗೆ ಅದು ಮುಂದುವರಿಯಬೇಕು ಎಂದು ಆರ್‌ಎಸ್‌ಎಸ್‌ ಹೇಳಿದೆ.

ದೇವಾಲಯಗಳು, ಸ್ಮಶಾನಗಳು ಮತ್ತು ನೀರಿನ ಮೂಲಗಳು ಎಲ್ಲರಿಗೂ ಮುಕ್ತವಾಗಿರಬೇಕು. ಇವು ಯಾವುದೇ ಒಂದು ಜಾತಿಗೆ ಮೀಸಲಾಗಿ ಇರಬಾರದು ಎಂಬುದು ಆರ್‌ಎಸ್‌ಎಸ್‌ನ ದೃಢ ನಂಬಿಕೆ ಎಂದು ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಮೂರು ದಿನಗಳ ಸಮನ್ವಯ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೀಸಲಾತಿಯು ಅನಿರ್ದಿಷ್ಟ ಅವಧಿಗೆ ಮುಂದುವರಿಯಬೇಕು ಎಂಬುದು ಆರ್‌ಎಸ್‌ಎಸ್‌ನ ನಿಲುವೇ ಎಂಬ ಪ್ರಶ್ನೆಗೆ, ಎಲ್ಲಿಯವರೆಗೆ ಮೀಸಲಾತಿ ಇರಬೇಕು ಎಂಬುದನ್ನು ಅದರ ಫಲಾನುಭವಿಗಳೇ ನಿರ್ಧರಿಸಬೇಕು ಎಂದರು.

ಸಮಾಜದಲ್ಲಿ ತಾರತಮ್ಯವನ್ನು ಕೊನೆಗಾಣಿಸುವುದಕ್ಕಾಗಿ ಆರ್‌ಎಸ್‌ಎಸ್‌ ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸಿ ದಲಿತ ಸಂಘಟನೆಯೊಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರಿಗೆ ಪತ್ರ ಬರೆದಿದೆ. ಎಂದು ಅವರು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ನ ಸಮನ್ವಯ ಸಭೆಯ ಕಾರ್ಯಸೂಚಿಯಲ್ಲಿ ಮೀಸಲಾತಿಯ ವಿಚಾರ ಇರಲಿಲ್ಲ. ಹಾಗಾಗಿ, ಈ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಅವರು ಹೇಳಿದರು.

ಆರ್‌ಎಸ್‌ಎಸ್‌ನ 35 ಅಂಗಸಂಸ್ಥೆಗಳ ಸುಮಾರು 200 ಪ್ರತಿನಿಧಿಗಳು ಸಮನ್ವಯ ಸಭೆಯಲ್ಲಿ ಭಾಗವಹಿಸಿದ್ದರು. ಲೋಕಸಭಾ ಚುನಾವಣೆ ಬಳಿಕ ನಡೆದ ಮೊದಲ ಸಭೆ ಇದು. ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.