ADVERTISEMENT

ರಾಜಸ್ಥಾನ | ಮುಸ್ಲಿಂ ಧರ್ಮದ 14 ಜಾತಿಗಳಿಗೆ OBC ಮೀಸಲಾತಿ; ಮರುಪರಿಶೀಲನೆ: ಸಚಿವ

ಪಿಟಿಐ
Published 25 ಮೇ 2024, 14:26 IST
Last Updated 25 ಮೇ 2024, 14:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜೈಪುರ: ಪ್ರಸಕ್ತ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಕುರಿತು ಬಿಜೆಪಿ ಮತ್ತು ವಿರೋಧ ಪಕ್ಷಗಳ ಒಕ್ಕೂಟದ ನಡುವೆ ಸಾಕಷ್ಟು ವಾಗ್‌ಯುದ್ಧಗಳು ನಡೆದಿವೆ. ಇದೀಗ ಮುಸ್ಲಿಮರಲ್ಲಿ ಕೆಲವು ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಿರುವುದನ್ನು ಮರುಪರಿಶೀಲಿಸಲಾಗುವುದು ಎಂದು ರಾಜಸ್ಥಾನದ ಸಚಿವರೊಬ್ಬರು ಹೇಳಿರುವುದು ಈಗ ಚರ್ಚೆಯ ವಿಷಯವಾಗಿದೆ.

ರಾಜಸ್ಥಾನದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್ ಗೆಹಲೋತ್ ಅವರು ಇಂಥದ್ದೊಂದು ಹೇಳಿಕೆ ನೀಡಿದ್ದು, ‘ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜಕೀಯ ಲಾಭಕ್ಕಾಗಿ ಮುಸ್ಲಿಂ ಧರ್ಮದ ಕೆಲ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿದೆ. ಅದನ್ನು ಪುನರ್ ಪರಿಶೀಲಿಸಲಾಗುವುದು’ ಎಂದಿದ್ದಾರೆ.

ADVERTISEMENT

‘ಧರ್ಮದ ಆಧಾರದ ಮೇಲೆ ಯಾವುದೇ ಜಾತಿ ಅಥವಾ ವರ್ಗಕ್ಕೆ ಮೀಸಲಾತಿಯ ಸೌಲಭ್ಯಗಳನ್ನು ನೀಡಬಾರದು ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಹೇಳಿದ್ದಾರೆ. ಮುಸ್ಲಿಂ ಧರ್ಮದ 14 ಜಾತಿಗಳಿಗೆ ಒಬಿಸಿ ಮೀಸಲಾತಿ ನೀಡಲಾಗಿದೆ. ಈ ಕುರಿತು ಇಲಾಖೆಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗೋವಿಂದ ಸಿಂಗ್ ದೊತಾಸ್ರಾ, ‘ತಮ್ಮ ಆಡಳಿತಾವಧಿಯ ಸಾಧನೆಯ ಪಟ್ಟಿಯನ್ನು ಜನರಿಗೆ ಹೇಳುವುದನ್ನು ಬಿಟ್ಟು, ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿಯ ನಾಯಕರು ಹಿಂದೂ–ಮುಸ್ಲಿಂ ರಾಜಕೀಯಕ್ಕೆ ಮುಂದಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಬಿಜೆಪಿ ನಡೆಸುತ್ತಿರುವ ಹಿಂದೂ–ಮುಸ್ಲಿಂ ರಾಜಕೀಯದ ಹೊರತಾಗಿಯೂ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ. ಹತ್ತು ವರ್ಷಗಳ ರಾಜಕೀಯದ ಲೆಕ್ಕವನ್ನು ದೇಶದ ಜನರು ಕೇಳುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಹಾಗೂ ಕೆಟ್ಟ ಆಡಳಿತ ಕುರಿತ ಜನರ ಪ್ರಶ್ನೆಗಳಿಗೆ ಬಿಜೆಪಿ ಹಿಂದೂ–ಮುಸ್ಲಿಂ ರಾಜಕೀಯಕ್ಕೆ ಮುಂದಾಗಿದೆ’ ಎಂದಿದ್ದಾರೆ.

ಎಐಎಂಐಎಂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಫ್‌ ಝುಬೇರಿ ಪ್ರತಿಕ್ರಿಯಿಸಿ, ‘ಮರುಪರಿಶೀಲಿಸಲು ಮುಂದಾದರೆ ಪ್ರತಿಭಟಿಸಲಾಗುವುದು. ಒಂದು ಧರ್ಮವನ್ನು ಗುರಿಯಾಗಿಸುವ ಬದಲು ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯನ್ನು ಮರು ಪರಿಶೀಲಿಸುವುದು ಉತ್ತಮ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.