ನವದೆಹಲಿ :ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳ ಮೊದಲು ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ (ಈವರೆಗೆ ಮೀಸಲಾತಿ ಪರಿಧಿಯ ಹೊರಗಿದ್ದ ಮೇಲ್ಜಾತಿಗಳು) ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ 10ರಷ್ಟು ಮೀಸಲಾತಿ ನೀಡಲು ತಿರ್ಮಾನಿಸಿದೆ.
ಇದಕ್ಕಾಗಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಈಗಾಗಲೇ ಶೇ 50ರಷ್ಟು ಮೀಸಲು ಇದೆ. ಹೊಸ ಮೀಸಲಾತಿ ಜಾರಿಗೆ ಬಂದರೆ ಒಟ್ಟು ಮೀಸಲು ಪ್ರಮಾಣ ಶೇ 60ಕ್ಕೆ ಏರಿಕೆಯಾಗಲಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜತೆಗೆ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇದೆ.ಆರ್ಥಿಕ ಸ್ಥಿತಿಯ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಹಾಗಾಗಿ ಸಂವಿಧಾನ ತಿದ್ದುಪಡಿ ಅನಿವಾರ್ಯ. ಸಂವಿಧಾನದ 15 ಮತ್ತು 16ನೇ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ.
‘ಸಂವಿಧಾನ ತಿದ್ದುಪಡಿ ಮೂಲಕ ಸಾಮಾನ್ಯ ವರ್ಗದ ಮೀಸಲಾತಿಗೆ ಸಾಂವಿಧಾನಿಕ ರಕ್ಷಣೆ ದೊರೆಯುತ್ತದೆ. ಹಾಗಾಗಿ, ಮೀಸಲು ಪ್ರಮಾಣವು ಶೇ 50ರಷ್ಟನ್ನು ಮೀರಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವು ಇಲ್ಲಿ ತೊಡಕಾಗದು’ ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ.
ಇದು ಚುನಾವಣಾ ತಂತ್ರ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ. ಆದರೆ, ಎಲ್ಲರ ಅಭಿವೃದ್ಧಿಯ ಸರ್ಕಾರದ ಧ್ಯೇಯಕ್ಕೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಹೇಳಿದೆ.
ರಾಜಕೀಯ ಲೆಕ್ಕಾಚಾರ
ಸಂವಿಧಾನ ತಿದ್ದುಪಡಿಗೆ ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡಷ್ಟು ಬೆಂಬಲ ಬೇಕು. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಆಗಬೇಕಾದರೆ ವಿರೋಧ ಪಕ್ಷಗಳ ಬೆಂಬಲ ಬೇಕೇ ಬೇಕು. ವಿರೋಧ ಪಕ್ಷಗಳು ಮಸೂದೆಯ ವಿರುದ್ಧ ಮತ ಹಾಕಿದರೆ ಪ್ರಭಾವಿ ಸಾಮಾನ್ಯ ವರ್ಗದ ಬೆಂಬಲವನ್ನು ಈ ಪಕ್ಷಗಳು ಕಳೆದುಕೊಳ್ಳಬಹುದು ಎಂಬುದು ಆಡಳಿತಾರೂಢ ಬಿಜೆಪಿಯ ಲೆಕ್ಕಾಚಾರ.
ಏಪ್ರಿಲ್–ಮೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಈ ಮಸೂದೆಯನ್ನು ಮುಂದಿಟ್ಟುಕೊಂಡು ಸಾಮಾನ್ಯ ವರ್ಗದ ಬೆಂಬಲ ಕ್ರೋಡೀಕರಣ ಬಿಜೆಪಿಯ ಉದ್ದೇಶ. ಹಿಂದುಳಿದ ವರ್ಗಗಳು ಮತ್ತು ದಲಿತರ ಪರವಾದ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡ ಕಾರಣ ಸಾಮಾನ್ಯ ವರ್ಗ ಬಿಜೆಪಿಯಿಂದ ದೂರ ಸರಿಯುತ್ತಿದೆ. ಈ ವರ್ಗವನ್ನು ಹಿಡಿದಿಟ್ಟುಕೊಳ್ಳಲು ಮೀಸಲು ಪ್ರಸ್ತಾವ ನೆರವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಯಾರಿಗೆ ಮೀಸಲಾತಿ?
ಬ್ರಾಹ್ಮಣರು
ರಜಪೂತರು (ಠಾಕೂರ್)
ಜಾಟ್,
ಮರಾಠ
ಭೂಮಿಹಾರ
ವೈಶ್ಯರು
ಅರ್ಹತೆ ಏನು?
* ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು
* ಐದು ಎಕರೆಗಿಂತ ಹೆಚ್ಚು ಕೃಷಿ ಜಮೀನು ಹೊಂದಿರಬಾರದು
* ಸಾವಿರ ಚದರ ಅಡಿಗಿಂತ ದೊಡ್ಡ ಮನೆ ಹೊಂದಿರಬಾರದು
* ಅಧಿಸೂಚಿತ ಪಟ್ಟಣ ಪ್ರದೇಶದಲ್ಲಿ 900 ಚದರ ಅಡಿಗಿಂತ (100 ಯಾರ್ಡ್), ಅಧಿಸೂಚಿತವಲ್ಲದ ಪಟ್ಟಣ ಪ್ರದೇಶದಲ್ಲಿ 1800 ಚದರ ಅಡಗಿಂತ (200 ಯಾರ್ಡ್) ದೊಡ್ಡ ನಿವೇಶನ ಹೊಂದಿರಬಾರದು.
ಶೇ.50 ಮೀರುವಂತಿಲ್ಲ
ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ನೀಡುವ ಒಟ್ಟು ಮೀಸಲಾತಿಯು ಶೇ 50ರಷ್ಟನ್ನು ಮೀರುವಂತಿಲ್ಲ ಎಂದು 1992ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಅಧ್ಯಯನ ಆಧರಿತ ಸಮರ್ಥನೆ ಇದ್ದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯಗಳಿಗೆ ಅವಕಾಶ ಇದೆ ಎಂದು 2010ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಸಂವಿಧಾನದ 15, 16ನೇ ವಿಧಿ
ಧರ್ಮ, ಜಾತಿ, ಜನಾಂಗ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ಇಲ್ಲ ಎಂದು ಸಂವಿಧಾನದ 15ನೇ ವಿಧಿ ಹೇಳುತ್ತದೆ. ಸರ್ಕಾರಿ ಉದ್ಯೋಗ ಅಥವಾ ನೇಮಕಾತಿಯ ವಿಚಾರದಲ್ಲಿ ಎಲ್ಲ ಪ್ರಜೆಗಳಿಗೆ ಸಮಾನ ಅವಕಾಶ ಇರಬೇಕು ಎಂದು 16ನೇ ವಿಧಿ ಪ್ರತಿಪಾದಿಸುತ್ತದೆ.
ಇದೇ ಮೊದಲಲ್ಲ
ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಪ್ರಸ್ತಾವ ಮತ್ತು ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಕೇಂದ್ರ ಸಚಿವ ರಾಮದಾಸ ಆಠವಲೆ ಅವರು ಹಿಂದೆ ಈ ಪ್ರಸ್ತಾವ ಇಟ್ಟಿದ್ದರು.
ಪಿ.ವಿ. ನರಸಿಂಹ ರಾವ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡುವ ಪ್ರಯತ್ನ ನಡೆದಿತ್ತು. ಮಂಡಲ್ ವರದಿ ಅನುಷ್ಠಾನದಿಂದಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಉಂಟಾಗಿದ್ದ ಆಕ್ರೋಶವನ್ನು ತಣ್ಣಗೆ ಮಾಡಲು ಈ ಕ್ರಮಕ್ಕೆ ಆಗಿನ ಸರ್ಕಾರ ಮುಂದಾಗಿತ್ತು. ಆದರೆ, ಒಟ್ಟು ಮೀಸಲಾತಿ ಶೇ 50ರಷ್ಟನ್ನು ಮೀರುತ್ತದೆ ಎಂಬ ಕಾರಣಕ್ಕೆ ಈ ಪ್ರಯತ್ನ ಆಗ ಕೈಗೂಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.