ಕೋಲ್ಕತ್ತ: ಹಿರಿಯ ನಾಗರಿಕರು, ಅಂಗವಿಕಲರು, ಮಹಿಳೆಯರಿಗೆ ಬಸ್‌ಗಳಲ್ಲಿ ಆಸನಗಳನ್ನು ಮೀಸಲಿಟ್ಟಿರುವಂತೆ, ಪಶ್ಚಿಮ ಬಂಗಾಳದ ಖಾಸಗಿ ಬಸ್‌ಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಎರಡು ಆಸನಗಳನ್ನು ಕಾಯ್ದಿರಿಸುವ ಮಹತ್ವದ ನಿರ್ಧಾರವೊಂದನ್ನು ಪಶ್ಚಿಮ ಬಂಗಾಳ ಖಾಸಗಿ ಬಸ್ ಮಾಲೀಕರ ಸಂಘದ ಒಕ್ಕೂಟಕೈಗೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸುಮಾರು 40 ಸಾವಿರ ಖಾಸಗಿ ಬಸ್‌ಗಳಿವೆ.ಪ್ರತಿ ಬಸ್‌ನಲ್ಲೂ ಎರಡು ಸೀಟುಗಳನ್ನು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಮೀಸಲಿಡಲಾಗುತ್ತಿದೆ. ಈ ಮೀಸಲು ಆಸನಗಳನ್ನು ’ತ್ರಿಧಾರಾ’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ’ ಎಂದು ಖಾಸಗಿಬಸ್ ಸಿಂಡಿಕೇಟ್‌ನ ಜಂಟಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ತಪನ್ ಬ್ಯಾನರ್ಜಿಹೇಳಿದ್ದಾರೆ.
’ಈ ಆಸನಗಳನ್ನು ಮೀಸಲಿಡುವುದರ ಉದ್ದೇಶ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಎಲ್ಲರಂತೆ ಅವರನ್ನೂ ಸಮಾನವಾಗಿ ಕಾಣಬೇಕೆಂಬ ಆಶಯವೂ ಇದೆ’ ಎಂದು ಬ್ಯಾನರ್ಜಿ ಹೇಳಿದ್ದಾರೆ
’ಪ್ರಯಾಣಿಕರಿಗೆ ಮಾತ್ರವಲ್ಲದೇ, ಬಸ್ ನಿರ್ವಹಣಾ ಸಿಬ್ಬಂದಿಗೂ ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಗೌರವದಿಂದ ನಡೆದುಕೊಳ್ಳುವ ಕುರಿತು ಅರಿವು ಮೂಡಿಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
’ಈಗಾಗಲೇ ಕೆಲವು ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಆಸನ ಮೀಸಲಿಡುವ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರದಲ್ಲೇ ಮಂಡಳಿಯ ಸಹಯೋಗದಲ್ಲಿ ಎಲ್ಲ ಬಸ್‌ಗಳಲ್ಲೂ ಇದನ್ನು ಅಳವಡಿಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
’ಖಾಸಗಿ ಬಸ್ ಮಾಲೀಕರ ಮಂಡಳಿ ಕೈಗೊಂಡಿರುವ ಈ ಕಾರ್ಯದ ಜತೆ ಉಳಿದ ಸಾರಿಗೆ ವಾಹನಗಳ ಸಂಘನೆಗಳೂ ಕೈ ಜೋಡಿಸಬೇಕು. ರಾಜ್ಯ ಸರ್ಕಾರದ ಸಾರಿಗೆ ವಾಹನಗಳಲ್ಲೂ ಇಂಥ ಸೌಲಭ್ಯವನ್ನು ಅಳವಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.