ADVERTISEMENT

ರಾಮಮಂದಿರ: ಬೇಸರವಿದ್ದರೆ ಕಾಲೊನಿಯಿಂದ ಹೊರನಡೆಯಿರಿ- ಕ್ಷೇಮಾಭಿವೃದ್ಧಿ ಸಂಘ

ಪ್ರಾಣಪ್ರತಿಷ್ಠಾಪನೆ: ಮಣಿ ಶಂಕರ್ ಅಯ್ಯರ್, ಅವರ ಪುತ್ರಿಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪತ್ರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 16:09 IST
Last Updated 31 ಜನವರಿ 2024, 16:09 IST
<div class="paragraphs"><p>ಅಯೋಧ್ಯೆಯ ರಾಮಮಂದಿರ</p></div>

ಅಯೋಧ್ಯೆಯ ರಾಮಮಂದಿರ

   

ಪಿಟಿಐ ಚಿತ್ರ 

ನವದೆಹಲಿ: ‘ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ತಪ್ಪು ಎಂಬುದೇ ನಿಮ್ಮ ನಿಲುವಾದರೆ ಈ ಕಾಲೊನಿಯಿಂದ ಹೊರನಡೆಯಿರಿ’ ಎಂದು ದೆಹಲಿಯ ಜಂಗ್‌ಪುರ ಕಾಲೊನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು, ಕಾಂಗ್ರೆಸ್‌ ಮುಖಂಡ ಮಣಿ ಶಂಕರ ಅಯ್ಯರ್ ಮತ್ತು ಅವರ ಪುತ್ರಿ ಸುರಣ್ಯಾಗೆ ಸೂಚಿಸಿದೆ.

ADVERTISEMENT

ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವಿರೋಧಿಸಿ ಮಣಿ ಶಂಕರ್ ಅಯ್ಯರ್ ಅವರ ಪುತ್ರಿ ಸುರಣ್ಯಾ ಈಚೆಗೆ ಮೂರು ದಿನ ಧರಣಿ ಪ್ರತಿಭಟನೆ ನಡೆಸಿದ್ದರು.

ದಕ್ಷಿಣ ದೆಹಲಿಯ ಜಂಗ್‌ಪುರ ಕಾಲೊನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಆರ್‌ಡಬ್ಲ್ಯುಎ) ಈ ಕುರಿತು ಇತ್ತೀಚೆಗೆ ಅಯ್ಯರ್‌ ಮತ್ತು ಅವರ ಪುತ್ರಿ ಸುರಣ್ಯಾಗೆ ಪತ್ರ ಬರೆದಿತ್ತು.

ಆದರೆ, ಸುರಣ್ಯಾ ಅವರು ನಾನು ಆ ಕಾಲೊನಿಯ ನಿವಾಸಿಯೇ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. 

ಪತ್ರವನ್ನು ಬರೆದಿದ್ದ ಆರ್‌ಡಬ್ಲ್ಯುಎ ಅಧ್ಯಕ್ಷ ಕಪಿಲ್‌ ಕಾಕರ್ ಅವರು, ‘ಪ್ರಾಣ ಪ್ರತಿಷ್ಠಾಪನೆ ಖಂಡಿಸಿ ಮೂರು ದಿನ ಧರಣಿ ನಡೆಸಿದ್ದರ ವಿರುದ್ಧ ನಿವಾಸಿಗಳು ತಮಗೆ ದೂರು ನೀಡಿದ್ದರು’ ಎಂದು ತಿಳಿಸಿದರು. 

‘ಕಾಲೊನಿಯಲ್ಲಿ ಶಾಂತಿಯನ್ನು ಕದಡುವ ಮತ್ತು ನಿವಾಸಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಇಂತಹ ವರ್ತನೆಯನ್ನು ಆರ್‌ಡಬ್ಲ್ಯುಎ ಸಹಿಸುವುದಿಲ್ಲ. ಧರಣಿ ನಡೆಸಿದ ಪುತ್ರಿಯ ವರ್ತನೆಯನ್ನು ಮಣಿ ಶಂಕರ್‌ ಅಯ್ಯರ್ ಅವರು ಖಂಡಿಸಬೇಕು. ಅವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಬಹುದು. ಆದರೆ, ಅದು ಪರಿಪೂರ್ಣವಲ್ಲ ಎಂದು ಸುಪ್ರೀಂ ಕೋರ್ಟ್ ಕೂಡಾ ಹೇಳಿದೆ’ ಎಂದು ಆರ್‌ಡಬ್ಲ್ಯುಎ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

ಒಂದು ವೇಳೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದುದರ ಕುರಿತು ಅಸಂತೋಷವಿದ್ದರೆ ಕೋರ್ಟ್‌ಗೆ ಹೋಗಬಹುದು. ಧರಣಿ ಮಾಡಿದ್ದು ಸರಿ ಎಂದೇ ಭಾವಿಸುವುದಾದರೆ, ಇಂಥ ನಡವಳಿಕೆಗಳನ್ನು ಸಹಿಸಿಕೊಳ್ಳುವ ನಿವಾಸಿಗಳಿರುವ ಬೇರೊಂದು ಕಾಲೊನಿಗೆ ನೀವು ಹೋಗಬಹುದು ಎಂದು ಪತ್ರದಲ್ಲಿ ಸಲಹೆ ಮಾಡಲಾಗಿದೆ.

‘ವಿದೇಶಕ್ಕೆ ಅಧ್ಯಯನಕ್ಕೆ ಹೋಗಿದ್ದ ಅವಧಿ ಹೊರತುಪಡಿಸಿ ಜೀವನದ ಬಹುತೇಕ ಅವಧಿಯನ್ನು ಇಲ್ಲಿಯೇ ಕಳೆದಿದ್ದೇನೆ. ಅಲ್ಲದೆ,  ಹಲವು ಕ್ಷೇತ್ರಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ನೋಟಿಸ್‌ ಅನ್ನು ನೀಡುವ ಇಂತಹ ಬೆಳವಣಿಗೆಗಳನ್ನು ತಡೆಯಬೇಕು ಎಂದು ನಿಮಗೆ ಅನ್ನಿಸುವುದಿಲ್ಲವೇ’ ಎಂದು ಸುರಣ್ಯಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

‘ಪರಸ್ಪರ ಎದುರಾಡುವ, ಕೂಗಾಡುವುದು ಅನಿವಾರ್ಯವಲ್ಲ. ಸುಂದರ ಸಂವಹನದ ಸಂಪ್ರದಾಯವನ್ನೇ ನಾವು ಮರೆತಿದ್ದೇವೆ ಎಂದು ನನಗನ್ನಿಸುತ್ತದೆ. ಹಿಂದೆಯೇ ನನ್ನ ಅಸಮಾಧಾನ ವ್ಯಕ್ತಪಡಿಸಿದ್ದೇನೆ. ನನ್ನ ನೋವನ್ನು ಮನೆಯಲ್ಲಿ ಶಾಂತಿಯುತವಾಗಿ ಧರಣಿ ಮಾಡುವ ಮೂಲಕ ವ್ಯಕ್ತಪಡಿಸಿದ್ದೆನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.