ಐಜ್ವಾಲ್: ಅಸ್ಸಾಂ ಜೊತೆಗಿನ ಗಡಿ ಭಾಗದ ಬಿಕ್ಕಟ್ಟನ್ನು ಸ್ನೇಹಪೂರ್ವಕವಾಗಿ ಪರಿಹರಿಸಿಕೊಳ್ಳಲು ಬಯಸುವುದಾಗಿ ಮಿಜೋರಾಂ ಮುಖ್ಯಮಂತ್ರಿ ಝೋರಮ್‌ತಂಗಾ ಭಾನುವಾರ ಹೇಳಿದ್ದಾರೆ.
'ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ದೂರವಾಣಿ ಮಾತುಕತೆಯ ಪ್ರಕಾರ, ಮಿಜೋರಾಂ–ಅಸ್ಸಾಂ ಗಡಿ ಭಾಗದ ಸಮಸ್ಯೆಯನ್ನು ಮಾತುಕತೆಯ ಮೂಲಕ ಸ್ನೇಹಪೂರ್ವಕವಾಗಿ ಬಗೆಹರಿಸಿಕೊಳ್ಳಲು ನಾವು ಒಪ್ಪಿದ್ದೇವೆ' ಎಂದು ಝೋರಮ್‌ತಂಗಾ ಟ್ವೀಟಿಸಿದ್ದಾರೆ.
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಸಹ ಈ ವಿಚಾರವಾಗಿ ಟ್ವೀಟಿಸಿದ್ದು, 'ಅಸ್ಸಾಂ–ಮಿಜೋರಾಂ ಗಡಿ ಭಾಗದಲ್ಲಿ ನಡೆದ ಘಟನೆಯನ್ನು ಉಭಯ ರಾಜ್ಯಗಳ ಜನರಿಗೆ ಒಪ್ಪಲು ಸಾಧ್ಯವಾಗದು. ಸಿಎಂ ಝೋರಮ್‌ತಂಗಾ ಅವರು ತಮ್ಮ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ನಂತರ ಕರೆ ಮಾಡುವ ಭರವಸೆ ನೀಡಿದ್ದಾರೆ. ಗಡಿ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಮಾತ್ರವೇ ಪರಿಹರಿಸಿಕೊಳ್ಳಲು ಸಾಧ್ಯ' ಎಂದಿದ್ದಾರೆ.
ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಘ್ನಗೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಜನರು ಸೂಕ್ಷ್ಮ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು ಎಂದು ಮಿಜೋರಾಂ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಅಸ್ಸಾಂ ಮತ್ತು ಮಿಜೋರಾಂ ಸರಿಸುಮಾರು 165 ಕಿ.ಮೀ ಉದ್ದದ ಗಡಿ ಹಂಚಿಕೊಂಡಿವೆ.
ಗಡಿ ಸಂಘರ್ಷದ ವಿಚಾರವಾಗಿ ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ಹಿಂಪಡೆಯಲು ಸಿದ್ಧರಿರುವುದಾಗಿ ಮಿಜೋರಾಂನ ಮುಖ್ಯಕಾರ್ಯದರ್ಶಿ ಹೇಳಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಹಾಗೂ ಅಸ್ಸಾಂನ ಆರು ಅಧಿಕಾರಿಗಳ ವಿರುದ್ಧ ಮಿಜೋರಾಂ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಸೋಮವಾರ ಅಸ್ಸಾಂ ಅಧಿಕಾರಿಗಳ ತಂಡದ ಮೇಲೆ ಮಿಜೋರಾಂ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಐವರು ಅಸ್ಸಾಂ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಮೃತಪಟ್ಟಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.