ADVERTISEMENT

ಜಮ್ಮು ಕಾಶ್ಮೀರ: ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆ

ಪ್ರಜಾತಂತ್ರ ಮರು ಸ್ಥಾಪನೆಯೇ ಸರ್ಕಾರದ ಗುರಿ; ಲೋಕಸಭೆಯಲ್ಲಿ ಗೃಹ ಸಚಿವ ಶಾ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:26 IST
Last Updated 28 ಜೂನ್ 2019, 19:26 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳ ಕಾಲ ವಿಸ್ತರಿಸುವ ಪ್ರಸ್ತಾವವನ್ನು ಗೃಹಸಚಿವ ಅಮಿತ್‌ ಶಾ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು.

ಗೃಹಸಚಿವರಾದ ಬಳಿಕ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದ ಮೊದಲ ಪ್ರಸ್ತಾವ ಇದು. ಬಳಿಕ ಮಾತನಾಡಿದ ಅವರು, ‘ಪ್ರಜಾತಂತ್ರವನ್ನು ಮರು ಸ್ಥಾಪಿಸುವುದು ಬಿಜೆಪಿ ನೇತೃತ್ವದ ಸರ್ಕಾರದ ಮೊದಲ ಆದ್ಯತೆಯಾಗಿರುತ್ತದೆ. ಚುನಾವಣಾ ಆಯೋಗವು ಪ್ರಸಕ್ತ ವರ್ಷಾಂತ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಮುಂದಾಗಿರುವುದರಿಂದ, ಇನ್ನೂ ಆರು ತಿಂಗಳ ಮಟ್ಟಿಗೆ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಮುಂದುವರಿಸಬೇಕಾಗಿದೆ’ ಎಂದರು.

‘ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕಲು ನಾವು ಬದ್ಧರಾಗಿದ್ದೇವೆ. ಕಳೆದ ಒಂದು ವರ್ಷದಲ್ಲಿ ಭಯೋತ್ಪಾದನೆಯ ವಿರುದ್ಧ ಸರ್ಕಾರ ಶೂನ್ಯ ಸಹನೆಯ ನೀತಿ ಅನುಸರಿಸಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗಳೇ ನಡೆಯುತ್ತಿರಲಿಲ್ಲ. ಈ ಬಾರಿ ಆ ಚುನಾವಣೆಗಳನ್ನು ನಡೆಸಲಾಗಿದೆ. ‘ಪಂಚ್‌’ ಹಾಗೂ ‘ಸರ್‌ಪಂಚ್‌’ ಅವರ ಖಾತೆಗಳಿಗೆ ಸರ್ಕಾರ ಈಗಾಗಲೇ ₹ 700 ಕೋಟಿ ವರ್ಗಾವಣೆ ಮಾಡಿದೆ, ಇನ್ನಷ್ಟು ಹಣ ವರ್ಗಾವಣೆ ಮಾಡಲಿದೆ. ಚುನಾವಣೆ ನಡೆದಾಗಲೆಲ್ಲಾ ಆ ರಾಜ್ಯದಲ್ಲಿ ಗಲಭೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ 40 ಸಾವಿರ ಸ್ಥಾನಗಳಿಗೆ ಚುನಾವಣೆ ನಡೆಸಿದ್ದರೂ ಎಲ್ಲೂ ಅಹಿತಕರ ಘಟನೆ ನಡೆದಿರಲಿಲ್ಲ. ಮತದಾನದ ಪ್ರಮಾಣ ಏರಿಕೆ ಆಗಿರುವುದಲ್ಲದೆ ಕಾನೂನು ಸುವ್ಯವಸ್ಥೆಯೂ ನಿಯಂತ್ರಣದಲ್ಲಿದೆ’ ಎಂದು ಶಾ ಉಲ್ಲೇಖಿಸಿದರು.

‘ಪಾಕ್‌ ಆಕ್ರಮಿತ ಕಾಶ್ಮೀರದ ವಲಸಿಗರ ಸಮಸ್ಯೆಯೂ ಸೇರಿದಂತೆ ರಾಜ್ಯ ಎದುರಿಸುತ್ತಿದ್ದ ಬಹುತೇಕ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಸ್ಥಳೀಯರಿಗೆ ಆಗಿರುವ ಹಾನಿಯನ್ನು ಭರಿಸಲು ಪರಿಹಾರವನ್ನೂ ನೀಡಲಾಗುತ್ತಿದೆ. ಗಡಿಭಾಗದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರ ಪ್ರಾಣಕ್ಕೂ ಸರ್ಕಾರ ಗೌರವ ಕೊಡುತ್ತದೆ. ನಿಗದಿತ ಅವಧಿಯೊಳಗೆ ಈ ಭಾಗದಲ್ಲಿ 15 ಸಾವಿರ ಬಂಕರ್‌ಗಳನ್ನು ಸರ್ಕಾರ ನಿರ್ಮಿಸಲಿದೆ ಎಂದ ಶಾ, ಸಂಸದರು ಪಕ್ಷ ರಾಜಕಾಣವನ್ನು ಮೀರಿ ಈ ಪ್ರಸ್ತಾವವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ನ ವಿರೋಧವಿದ್ದರೂ ಲೋಕಸಭೆಯಲ್ಲಿ ಪ್ರಸ್ತಾವ ಅಂಗೀಕಾರವಾಯಿತು.

ಜಮ್ಮು ಕಾಶ್ಮೀರ ಮೀಸಲಾತಿ (ತಿಡ್ಡುಪಡಿ) ಮಸೂದೆ: ಸಚಿವ ಅಮಿತ್‌ ಶಾ ಅವರು ‘ಜಮ್ಮು ಕಾಶ್ಮೀರ ಮೀಸಲಾತಿ (ತಿಡ್ಡುಪಡಿ) ಮಸೂದೆ–2019’ ಅನ್ನೂ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು. ಹಿಂದಿನ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಇದನ್ನು ಜಾರಿಗೆ ತಂದಿತ್ತು.

ರಾಜ್ಯದಲ್ಲಿ ಶೇ 43ರಷ್ಟು ಮೀಸಲಾತಿ ಜಾರಿಯಲ್ಲಿದೆ. ಅದರಲ್ಲಿ ಶೇ 3ರಷ್ಟನ್ನು ವಾಸ್ತವ ಗಡಿನಿಯಂತ್ರಣ ರೇಖೆಯ ಸಮೀಪದ ನಿವಾಸಿ
ಗಳಿಗೆ ನೀಡಲಾಗುತ್ತದೆ. ಹೊಸ ಮಸೂದೆ ರಾಜ್ಯದ ಅಂತರರಾಷ್ಟ್ರೀಯ ಗಡಿರೇಖೆ ಸಮೀಪದ ನಿವಾಸಿಗಳಿಗೂ ಶೇ 3ರಷ್ಟು ಮೀಸಲಾತಿ
ಯನ್ನು ಖಚಿತಪಡಿಸುತ್ತದೆ ಎಂದರು.

ರಾಷ್ಟ್ರದ ಹಿತ ಇಲ್ಲ: ಕಾಂಗ್ರೆಸ್‌

ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸುವುದರಲ್ಲಿ ರಾಷ್ಟ್ರದ ಹಿತ ಇಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡಲು ಮತ್ತು ರಾಷ್ಟ್ರದ ಹಿತದ ದೃಷ್ಟಿಯಿಂದ ಅಲ್ಲಿ ಜನರಿಂದಲೇ ಆಯ್ಕೆಯಾಗಿರುವ ಸರ್ಕಾರವನ್ನು ಸ್ಥಾಪಿಸಬೇಕು’ ಎಂದು ಕಾಂಗ್ರೆಸ್‌ನ ಸಂಸದ ಮನೀಷ್‌ ತಿವಾರಿ ವಾದಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸುವ ಪ್ರಸ್ತಾವವನ್ನು ವಿರೋಧಿಸಿ ಮಾತನಾಡಿದ ಅವರು, ‘ಬಿಜೆಪಿ ಆಡಳಿತ ಬಂದ ನಂತರ ಜಮ್ಮು ಮತ್ತು ಕಾಶ್ಮೀರದ ಜನರಲ್ಲಿ ಪರಕೀಯತೆಯ ಭಾವ ದಟ್ಟವಾಗಿದೆ. ಸೈದ್ಧಾಂತಿಕವಾಗಿ ಎಲ್ಲಿಯೂ ತಾಳೆಯಾಗದಂಥ ಬಿಜೆಪಿ– ಪಿಡಿಪಿ ಮೈತ್ರಿಯೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಅನಿವಾರ್ಯವಾಗಲು ಕಾರಣ’ ಎಂದು ತಿವಾರಿ ವಾದಿಸಿದರು.

‘ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ನಾನಾಗಲಿ, ನನ್ನ ಪಕ್ಷವಾಗಲಿ ವಿರೋಧಿಸುವುದಿಲ್ಲ. ಆದರೆ ಸ್ಥಳೀಯ ಜನರೇ ನಿಮ್ಮ ಜೊತೆಗಿಲ್ಲದಿದ್ದರೆ ಹೋರಾಟವನ್ನು ಗೆಲ್ಲಲಾಗದು. ಸ್ಥಳೀಯರಲ್ಲಿ ಪರಕೀಯ ಭಾವನೆ ಮೂಡಿಸುವಂಥ ಯಾವುದೇ ಹೆಜ್ಜೆಯನ್ನು ಸರ್ಕಾರ ಇಡಬಾರದು. ಆ ಜನರನ್ನು ರಾಷ್ಟ್ರೀಯತೆಯ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಶ್ರಮ ಹಾಕಬೇಕು. ಬಿಜೆಪಿಯು ತನ್ನ ‘ಸಿದ್ಧಾಂತದ ಕನ್ನಡಕ’ದ ಮೂಲಕ ಜಮ್ಮು ಕಾಶ್ಮೀರವನ್ನು ನೋಡಿದರೆ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಲಾರದು’ ಎಂದು ತಿವಾರಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.