ADVERTISEMENT

ಸರ್ವಾಧಿಕಾರಿ ದಬ್ಬಾಳಿಕೆಗೆ ಕ್ರಾಂತಿಕಾರಿಗಳು ತಲೆಬಾಗುವುದಿಲ್ಲ: BJP ವಿರುದ್ಧ AAP

ಪಿಟಿಐ
Published 2 ಸೆಪ್ಟೆಂಬರ್ 2024, 9:42 IST
Last Updated 2 ಸೆಪ್ಟೆಂಬರ್ 2024, 9:42 IST
ಎಎಪಿ ಲಾಂಛನ
ಎಎಪಿ ಲಾಂಛನ   

ನವದೆಹಲಿ: ಸುಳ್ಳು ಪ್ರಕರಣದಲ್ಲಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಪಕ್ಷದ ಧ್ವನಿ ಹತ್ತಿಕ್ಕಲು ಆಡಳಿತಾರೂಢ ಬಿಜೆಪಿ ಎಷ್ಟು ಪ್ರಯತ್ನಿಸುತ್ತದೆಯೋ, ಪಕ್ಷದ ಧ್ವನಿ ಅದಕ್ಕಿಂತ ಹೆಚ್ಚು ಪ್ರತಿಧ್ವನಿಸುತ್ತದೆ ಎಂದು ಎಎಪಿ ಹೇಳಿದೆ.

ಯಾವುದೇ ಪುರಾವೆಗಳಿಲ್ಲದೆ ಖಾನ್‌ ಅವರನ್ನು ಬಲವಂತವಾಗಿ ಬಂಧಿಸಲಾಗಿದೆ ಎಂದು ಸಂಸದ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಅಮಾನತುಲ್ಲಾ ಖಾನ್‌ ಮತ್ತು ಇತರ ಕೆಲವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಓಖ್ಲಾದಲ್ಲಿರುವ ಖಾನ್‌ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಇ.ಡಿ ಅಧಿಕಾರಿಗಳು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

‘ಸರ್ವಾಧಿಕಾರಿ ದಬ್ಬಾಳಿಕೆಗೆ ಕ್ರಾಂತಿಕಾರಿಗಳು ತಲೆಬಾಗುವುದಿಲ್ಲ. ಸುಳ್ಳು ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್‌ ಅವರನ್ನು ಬಿಜೆಪಿಯ ಇ.ಡಿ ವಶಕ್ಕೆ ಪಡೆದಿದೆ. ನಮ್ಮನ್ನು ಹತ್ತಿಕ್ಕಲು ಬಿಜೆಪಿಗರು ಹೆಚ್ಚು ಪ್ರಯತ್ನಿಸಿದಷ್ಟು, ನಮ್ಮ ಧ್ವನಿ ಹೆಚ್ಚು ಪ್ರತಿಧ್ವನಿಸುತ್ತದೆ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಎಎಪಿ ಬರೆದುಕೊಂಡಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಅವರ ಮೇಲೆ ಎರಡು ಎಫ್ಐಆರ್‌ಗಳು ದಾಖಲಾಗಿವೆ. ವಕ್ಫ್ ಬೋರ್ಡ್‌ನಲ್ಲಿ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದು ಎಫ್‌ಐಆರ್‌ ಅನ್ನು ಸಿಬಿಐ ದಾಖಲಿಸಿದ್ದರೆ, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ದೆಹಲಿ ಎಸಿಬಿ (ಭ್ರಷ್ಟಾಚಾರ ವಿರೋಧಿ ಶಾಖೆ) ಮತ್ತೊಂದು ಪ್ರಕರಣ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.