ನವದೆಹಲಿ: ಲೋಕಸಭಾ ಕಲಾಪದ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಸದ ರಮೇಶ್ ಬಿಧೂಢಿ ಅವರಿಗೆ ಬಿಜೆಪಿಯು ರಾಜಸ್ಥಾನದ ಚುನಾವಣಾ ಜವಾಬ್ದಾರಿ ನೀಡುವ ಮೂಲಕ, ದ್ವೇಷ ಭಾಷಣ ಹರಡಿದ್ದಕ್ಕಾಗಿ ಪುರಸ್ಕಾರ ಮಾಡಿದೆ ಎಂದು ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಗುರುವಾರ ಪ್ರತಿಕ್ರಿಯಿಸಿದ್ದಾರೆ.
‘ಈ ಮೂಲಕ ಆಡಳಿತಾರೂಢ ಪಕ್ಷದ ನಡವಳಿಕೆಯೂ ಬಹಿರಂಗವಾಗಿದೆ’ ಎಂದು ಟೀಕಿಸಿರುವ ಅಲಿ ಅವರು, ‘ಸಂವಿಧಾನದ ಸಂಪ್ರದಾಯಗಳಿಗೆ ಅನುಗುಣವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬಿಧೂಢಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ’ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
ಕಳೆದ ವಾರ ಲೋಕಸಭೆಯಲ್ಲಿ ಚಂದ್ರಯಾನ–3ರ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂಢಿ ಅವರು ಅಲಿ ಅವರ ವಿರುದ್ಧ ನೀಡಿದ ಆಕ್ಷೇಪಾರ್ಹ ಹೇಳಿಕೆಯು ಕೋಲಾಹಲ ಎಬ್ಬಿಸಿತ್ತು. ಬಿಜೆಪಿ ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಆಗ್ರಹಿಸಿದ್ದರು.
‘ವಿಶ್ವದ ಅತಿದೊಡ್ಡ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಬಗ್ಗೆ ದೇಶದ ಜನರು ಕೆಲವು ನೈತಿಕತೆಯ ನಿರೀಕ್ಷೆಗಳನ್ನು ಹೊಂದಿದ್ದಾರೆ. ನೀವು ಬಿಧೂಢಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದೀರಿ. ಅದರ ಉತ್ತರವನ್ನು ಸಾರ್ವಜನಿಕವಾಗಿ ತಿಳಿಸಿ’ ಎಂದು ಅವರು ಆಗ್ರಹಿಸಿದ್ದಾರೆ.
ಬಿಜೆಪಿಯು ಸಂಸದ ರಮೇಶ್ ಬಿಧೂಢಿ ಅವರಿಗೆ ರಾಜಸ್ಥಾನದ ಟೊಂಕ್ ಜಿಲ್ಲೆಯ ಚುನಾವಣಾ ಜವಾಬ್ದಾರಿಯನ್ನು ಬುಧವಾರ ವಹಿಸಿತ್ತು. ಅದರ ಬೆನ್ನಲ್ಲೇ ಅಲಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
ವಿರೋಧ ಪಕ್ಷಗಳಿಂದಲೂ ಟೀಕೆ: ಬಿಜೆಪಿ ನಡೆಯನ್ನು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳೂ ಖಂಡಿಸಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎಂಬ ಇವರ ಘೋಷಣೆಗಳೆಲ್ಲ ಅಸಂಬದ್ಧವಾಗಿವೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು, ‘ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ ಅವರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ ಬಿಧೂಡಿ ಅವರಿಗೆ ಬಿಜೆಪಿ ಬಹುಮಾನ ನೀಡಿದೆ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.