ಕೋಲ್ಕತ್ತ: ಇಲ್ಲಿನ ಆರ್.ಜಿ ಕರ್ ಆಸ್ಪತ್ರೆ ಘಟನೆಗೆ ಸಂಬಂಧಿಸಿದಂತೆ ಕಿರಿಯ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಆರನೇ ದಿನವೂ ಮುಂದುವರಿದಿದೆ. ಪ್ರತಿಭಟನೆಗೆ ದೇಶದಾದ್ಯಂತ ಹಲವು ಹಿರಿಯ ವೈದ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗನೇ ಮಧ್ಯಸ್ಥಿಕೆ ವಹಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಒತ್ತಾಯಿಸಿದೆ.
‘ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರಿಗೆ ಯಾವುದೇ ಹಾನಿಯಾದರೆ ರಾಷ್ಟ್ರವ್ಯಾಪಿ ವೈದ್ಯಕೀಯ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ’ ಅಖಿಲ ಭಾರತ ವೈದ್ಯಕೀಯ ಸಂಘದ ಒಕ್ಕೂಟ (ಎಫ್‌ಎಐಎಂಎ) ಎಚ್ಚರಿಸಿದೆ.
ಶುಕ್ರವಾರ ಐಎಂಎ ರಾಷ್ಟ್ರೀಯ ಅಧ್ಯಕ್ಷ ಆರ್.ವಿ ಅಶೋಕನ್ ಧರಣಿ ನಿರತ ಕಿರಿಯ ವೈದ್ಯರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.
ಉಪವಾಸ ಸತ್ಯಾಗ್ರಹದಿಂದಾಗಿ ಅಸ್ವಸ್ಥಗೊಂಡು ಆರ್.ಜಿ ಕರ್ ಆಸ್ಪತ್ರೆಗೆ ದಾಖಲಾಗಿರುವ ಕಿರಿಯ ವೈದ್ಯಾಧಿಕಾರಿಯನ್ನು ಭೇಟಿ ಮಾಡಿದ ಅವರು, ‘ಈ ಮಕ್ಕಳು ತಮಗಾಗಿ ಅಲ್ಲದೆ, ಜನರಿಗಾಗಿ ಹೋರಾಡುತ್ತಿರುವ ರೀತಿ ನನಗೆ ಮನದಟ್ಟಾಗಿದೆ, ಇವರೇ ನಿಜವಾದ ಹೀರೋಗಳು. ನಾವೆಲ್ಲರೂ ಇವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ’ ಎಂದು ಪ್ರತಿಭಟನಾಕಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಇನ್ನು ಮುಂದೆ ಸಮಯ ವ್ಯರ್ಥ ಮಾಡದೇ ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸುವಂತೆ’ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅಶೋಕನ್ ಕರೆ ನೀಡಿದರು.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಿರಿಯ ವೈದ್ಯ ಅನಿಕೇತ್ ಮಹತೋ ಎಂಬುವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಇತರ ಆರು ಕಿರಿಯ ವೈದ್ಯರ ಆರೋಗ್ಯವೂ ಕ್ಷೀಣಿಸುತ್ತಿದೆ, ಆದರೂ ಅವರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಪ್ರತಿಭಟನಾ ನಿರತ ವೈದ್ಯರಲ್ಲಿ ಒಬ್ಬರಾದ ದೇಬಾಶಿಶ್ ಹಲ್ಡರ್ ತಿಳಿಸಿದರು.
ಕೋಲ್ಕತ್ತದ ಆರ್.ಜಿ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಮತ್ತು ಆಸ್ಪತ್ರೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.