ಕೋಲ್ಕತ್ತ: ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮನ್ನು ಭೇಟಿಯಾಗಲು ಕರೆದಿದ್ದಾರೆ ಎಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಅತ್ಯಾಚಾರ ಹಾಗೂ ಹತ್ಯೆಗೀಡಾಗಿರುವ ವೈದ್ಯ ವಿದ್ಯಾರ್ಥಿನಿಯ ತಂದೆ ತಿಳಿಸಿದ್ದಾರೆ.
ಆದರೆ ಅಮಿತ್ ಶಾ ಅವರೊಂದಿಗಿನ ಮಾತುಕತೆ ಕುರಿತು ಹೆಚ್ಚಿನ ವಿವರಗಳನ್ನು ಅವರು ನೀಡಲಿಲ್ಲ.
'ನಾನು ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಅವರು ನನ್ನನ್ನು ಭೇಟಿಯಾಗಲು ಕರೆದಿದ್ದಾರೆ. ನಾನು ಈ ಕುರಿತು ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ. ಆದರೆ ಭೇಟಿಯಾಗಲಿದ್ದೇನೆ' ಎಂದಷ್ಟೇ ತಿಳಿಸಿದ್ದಾರೆ.
ಅಮಿತ್ ಶಾ ಅವರ ಭೇಟಿಗಾಗಿ ಅನುಮತಿ ಕೋರಿ ಸಂತ್ರಸ್ತೆಯ ಪೋಷಕರು ಅಕ್ಟೋಬರ್ 22ರಂದು ಪತ್ರ ಬರೆದಿದ್ದರು.
ಅಕ್ಟೋಬರ್ 27ರಂದು ಅಮಿತ್ ಶಾ ಕೋಲ್ಕತ್ತಕ್ಕೆ ಆಗಮಿಸಿದಾಗ ಭೇಟಿಗೆ ಅವಕಾಶ ನೀಡುವುದಾಗಿ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ತಿಳಿಸಿದ್ದರು. ಆದರೆ ಅಮಿತ್ ಶಾ ಅವರನ್ನು ಭೇಟಿಯಾಗಲು ಪೋಷಕರಿಗೆ ಸಾಧ್ಯವಾಗಿರಲಿಲ್ಲ.
ಆಗಸ್ಟ್ 9ರಂದು ವೈದ್ಯ ವಿದ್ಯಾರ್ಥಿನಿಯ ಮೃತದೇಹ ಆರ್.ಜಿ.ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿತ್ತು. ಈ ಘಟನೆಯು ದೇಶದಾದ್ಯಂತ ಭಾರಿ ಆಕ್ರೋಶ-ಪ್ರತಿಭಟನೆಗೆ ಕಾರಣವಾಗಿತ್ತು. ಕಿರಿಯ ವೈದ್ಯರು ಕೆಲಸವನ್ನು ಬಹಿಷ್ಕರಿಸಿ ನ್ಯಾಯಕ್ಕಾಗಿ ಬೀದಿಗಿಳಿದಿದ್ದರು.
ಬೇಡಿಕೆಗಳನ್ನು ಈಡೇರಿಸುವುದಾಗಿ ಪಶ್ಚಿಮ ಬಂಗಾಳದ ಸರ್ಕಾರದ ನೀಡಿದ ಭರವಸೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 21ರಂದು 42 ದಿನಗಳ ಪ್ರತಿಭಟನೆಯನ್ನು ಕಿರಿಯ ವೈದ್ಯರು ಹಿಂಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.