ಕೋಲ್ಕತ್ತ: ಇಲ್ಲಿನ ಆರ್.ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾದ ವೈದ್ಯ ವಿದ್ಯಾರ್ಥಿನಿಯ ಮೊಬೈಲ್ ಕರೆಗಳ ದಾಖಲೆಗಳನ್ನು ಉಳಿಸುವಂತೆ ಆಕೆಯ ತಂದೆ ಮನವಿ ಮಾಡಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಕೊಲೆಯಾಗುವ ಐದು ಗಂಟೆಗಳ ಮೊದಲು ಮಗಳೊಂದಿಗೆ ಫೋನ್‌ನಲ್ಲಿ ಮಾತನಾಡಿರುವುದಾಗಿ ಸಂತ್ರಸ್ತೆಯ ತಂದೆ ಸಿಬಿಐಗೆ ತಿಳಿಸಿದ್ದಾರೆ.
ಈ ಕುರಿತು ಸಿಬಿಐಗೆ ಪತ್ರ ಬರೆದಿರುವ ತಂದೆ, ಆಗಸ್ಟ್ 9ರಂದು ವೈದ್ಯ ವಿದ್ಯಾರ್ಥಿನಿಯ ಶವ ಪತ್ತೆಯಾದ ದಿನದ ಆಸ್ಪತ್ರೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು, ಮುಖ್ಯವಾಗಿ ಸೆಮಿನಾರ್ ಹಾಲ್‌ನ ಮಹಡಿಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಭದ್ರಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ತಮ್ಮ ಮಗಳ ಸಾವಿನ ರಹಸ್ಯದ ತನಿಖೆ ಕುರಿತು ಅಸಹಾಯಕತೆ ಮತ್ತು ಆತಂಕ ವ್ಯಕ್ತಪಡಿಸಿರುವ ತಂದೆ, ಆಗಸ್ಟ್ 8ರಂದು ತಮ್ಮ ಮಗಳೊಂದಿಗೆ ಯಾರೆಲ್ಲಾ ಕರ್ತವ್ಯದಲ್ಲಿದ್ದರು ಎಂಬುದನ್ನು ಪತ್ತೆ ಹಚ್ಚಲು ಡ್ಯೂಟಿ ಚಾರ್ಟ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಕೃತ್ಯದಲ್ಲಿ ಆಸ್ಪತ್ರೆಯ ಕೆಲವು ಸಿಬ್ಬಂದಿ ಮತ್ತು ವೈದ್ಯರು ಭಾಗಿಯಾಗಿರಬಹುದು ಎಂದು ಎರಡು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.