ಕೋಲ್ಕತ್ತ(ಪಶ್ಚಿಮ ಬಂಗಾಳ): ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಕ್ಟೋಬರ್ 22 ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕಿರಿಯ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಹಾಗೂ ಹತ್ಯೆಗೀಡಾಗಿರುವ ವೈದ್ಯ ವಿದ್ಯಾರ್ಥಿನಿಗೆ ನ್ಯಾಯಾಕ್ಕಾಗಿ ಹಾಗೂ ಕೆಲಸದ ಸ್ಥಳದಲ್ಲಿ ಭದ್ರತೆಗಾಗಿ ಆಗ್ರಹಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಅಮರಣಾಂತ ಉಪವಾಸ ಶನಿವಾರ 15ನೇ ದಿನಕ್ಕೆ ಕಾಲಿರಿಸಿದೆ.
ಬೇರೆ ರಾಜ್ಯಗಳಲ್ಲಿರುವ ತಮ್ಮ ಸಹೋದ್ಯೋಗಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಮಂಗಳವಾರ (ಅ.22) ದೇಶದಾದ್ಯಂತ ವೈದ್ಯರ ಪ್ರತಿಭಟನೆ ಕೂಡ ನಡೆಯುವ ಸಾಧ್ಯತೆ ಇದೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಅಕ್ಟೋಬರ್ 21ರವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ ಎಂದು ಕಿರಿಯ ವೈದ್ಯರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚರ್ಚೆ ನಡೆಸಿ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಅಲ್ಲಯವರೆಗೆ ಅನಿರ್ದಿಷ್ಟಾವಧಿ ಉಪವಾಸ ಮುಂದುವರೆಸುತ್ತೇವೆ ಎಂದು ಧರಣಿ ನಿರತ ಕಿರಿಯ ವೈದ್ಯ ದೇಬಾಶಿಶ್ ಹಾಲ್ದರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.