ADVERTISEMENT

ಕೋಲ್ಕತ್ತ | 10ನೇ ದಿನಕ್ಕೆ ವೈದ್ಯರ ಉಪವಾಸ: ರಾಜಭವನಕ್ಕೆ ರ‍್ಯಾಲಿ

ಹದಗೆಟ್ಟಿದ ಧರಣಿ ನಿರತ ಇಬ್ಬರ ಆರೋಗ್ಯ

ಪಿಟಿಐ
Published 14 ಅಕ್ಟೋಬರ್ 2024, 14:45 IST
Last Updated 14 ಅಕ್ಟೋಬರ್ 2024, 14:45 IST
<div class="paragraphs"><p>ಪ್ರತಿಭಟನಾ ರ‍್ಯಾಲಿ ನಡೆಸಿ ರಾಜ್ಯಪಾಲರನ್ನು ಭೇಟಿ ಮಾಡಲು ಕಿರಿಯ ವೈದ್ಯರು ರಾಜಭವನಕ್ಕೆ ತೆರಳಿದ್ದ ವೇಳೆ ಅವರಿಗಾಗಿ ಕಾದು ಕುಳಿತಿದ್ದ ಮಾಧ್ಯಮದವರು ಹಾಗೂ ಪೊಲೀಸ್‌ ಸಿಬ್ಬಂದಿ.</p></div>

ಪ್ರತಿಭಟನಾ ರ‍್ಯಾಲಿ ನಡೆಸಿ ರಾಜ್ಯಪಾಲರನ್ನು ಭೇಟಿ ಮಾಡಲು ಕಿರಿಯ ವೈದ್ಯರು ರಾಜಭವನಕ್ಕೆ ತೆರಳಿದ್ದ ವೇಳೆ ಅವರಿಗಾಗಿ ಕಾದು ಕುಳಿತಿದ್ದ ಮಾಧ್ಯಮದವರು ಹಾಗೂ ಪೊಲೀಸ್‌ ಸಿಬ್ಬಂದಿ.

   

ಕೋಲ್ಕತ್ತ: ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಆಗ್ರಹಿಸಿ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಸೋಮವಾರ 10ನೇ ದಿನಕ್ಕೆ ಕಾಲಿರಿಸಿದೆ.

ಉಪವಾಸ ನಿರತ ವೈದ್ಯರಲ್ಲಿ ಮತ್ತಿಬ್ಬರ ಆರೋಗ್ಯ ಹದಗೆಟ್ಟಿದ್ದು, ಅವರಲ್ಲಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಉಪವಾಸನಿರತ ಎನ್‌ಆರ್‌ಎಸ್‌ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯ ಪುಲಾಸ್ತ ಆಚಾರ್ಯ ಅವರ ಆರೋಗ್ಯ ಹದಗೆಟ್ಟಿದ್ದು, ಭಾನುವಾರ ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಪುಲಾಸ್ತ ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲು ನಾವು ವೈದ್ಯರ ಗುಂಪು ರಚಿಸಿದ್ದೇವೆ’ ಎಂದು ಎನ್‌ಆರ್‌ಎಸ್‌ ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ತಿಳಿಸಿದ್ದಾರೆ.

‘ತಾನ್ಯ ಪಾಂಜಾ ಎಂಬ ಮತ್ತೊಬ್ಬ ಕಿರಿಯ ವೈದ್ಯೆಯ ಆರೋಗ್ಯ ಕೂಡ ಸೋಮವಾರ ಮಧ್ಯಾಹ್ನ ಹದಗೆಟ್ಟಿದೆ. ಆಕೆಯ ದೇಹ ಸ್ಥಿತಿ ಸ್ಥಿರವಾಗಿದ್ದು, ಧರಣಿ ನಿರತ ಸ್ಥಳದಲ್ಲೇ ಆಕೆಯ ಬಗ್ಗೆ ನಿಗಾವಹಿಸಲಾಗಿದೆ,’ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಸಮಾವೇಶ ರದ್ದತಿಗೆ ಮನವಿ: ರಾಜ್ಯದಲ್ಲಿ ಅ.15ರಂದು ‘ದುರ್ಗಾ ಪೂಜಾ ಮಹೋತ್ಸವ’ ಇದೆ. ಆದರೆ, ಅದೇ ದಿನ ವೈದ್ಯರು ಸಮಾವೇಶ ಹಮ್ಮಿಕೊಂಡಿದ್ದಾರೆ. ಪೂಜಾ ಮಹೋತ್ಸವದ ಹಿನ್ನೆಲೆಯಲ್ಲಿ ಸಮಾವೇಶ ರದ್ದುಗೊಳಿಸಬೇಕೆಂದು ವೈದ್ಯರ ಜಂಟಿ ವೇದಿಕೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್‌ ಪಂತ್‌ ಆಗ್ರಹಿಸಿದ್ದಾರೆ.

ಆದರೆ, ಪಂತ್‌ ಅವರ ಈ ಆಗ್ರಹಕ್ಕೆ ವೈದ್ಯರ ಜಂಟಿ ವೇದಿಕೆ ಬೇಸರ ವ್ಯಕ್ತಪಡಿಸಿದೆ. ಕಿರಿಯ ವೈದ್ಯರು ಆಮರಣಾಂತ ಉಪವಾಸ ಮಾಡುತ್ತಿದ್ದರೂ ಸರ್ಕಾರ ಹಬ್ಬದ ಆಚರಣೆಗೆ ಆದ್ಯತೆ ನೀಡಿದೆ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

ರಾಜಭವನಕ್ಕೆ ಪ್ರತಿಭಟನಾ ರ‍್ಯಾಲಿ
ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ನಡುವೆಯೂ ಕಿರಿಯ ವೈದ್ಯರು ಸೋಮವಾರ ರಾಜಭವನಕ್ಕೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಅ.5ರಿಂದ ನಡೆಯುತ್ತಿರುವ ಆಮರಣಾಂತ ಉಪವಾಸ ಸ್ಥಳವಾದ ಧರ್ಮತಳ ಬಳಿಯ ಡೊರಿನಾ ಕ್ರಾಸಿಂಗ್‌ನಿಂದ ಮೆರವಣಿಗೆ ಆರಂಭವಾಯಿತು. ಈ ವೇಳೆ ಸಾರ್ವಜನಿಕರೂ ರ‍್ಯಾಲಿಯಲ್ಲಿ ಪಾಲ್ಗೊಂಡರು. ‘ಅಪರಾಧದ ಹಿಂದೆ ಕೇವಲ ಒಬ್ಬ ವ್ಯಕ್ತಿ ಇದ್ದಾನೆ ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ಹೇಳಿರುವುದನ್ನು ನಾವು ಒಪ್ಪುವುದಿಲ್ಲ. ಅತ್ಯಾಚಾರ ಘಟನೆ ಬಗ್ಗೆ ತ್ವರಿತ ಹಾಗೂ ಪಾರದರ್ಶಕ ತನಿಖೆಯಾಗಬೇಕು. ನಾವು ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳುತ್ತಿಲ್ಲ. ಬದಲಿಗೆ ಅವರಿಗೆ ನಮ್ಮ ಪ್ರತಿಭಟನೆಯ ಸಂದೇಶವನ್ನಷ್ಟೇ ತಿಳಿಸುತ್ತಿದ್ದೇವೆ’ ಎಂದು ಕಿರಿಯ ವೈದ್ಯರೊಬ್ಬರಾದ ದೇಬಶಿಶ್‌ ಹಾಲ್ದರ್‌ ಹೇಳಿದರು.
ಗಡುವಿಗೆ ಒಪ್ಪದ ಸರ್ಕಾರ: ಫಲ ನೀಡದ ಸಭೆ
ಕೋಲ್ಕತ್ತ: ಆರ್‌.ಜಿ ಕರ್‌ ಪ್ರಕರಣದಿಂದ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಸೋಮವಾರ ಆಯೋಜಿಸಿದ್ದ ಪಶ್ಚಿಮ ಬಂಗಾಳದ 12 ವೈದ್ಯರಿದ್ದ ಸಂಘ ಹಾಗೂ ಮುಖ್ಯಕಾರ್ಯದರ್ಶಿ ಮನೋಜ್‌ ಪಂತ್‌ ಅವರ ನಡುವಿನ ನಿರ್ಣಾಯಕ ಸಭೆ ಯಾವುದೇ ಫಲ ನೀಡಲಿಲ್ಲ. ಬಿಕ್ಕಟ್ಟು ಶಮನಕ್ಕೆ ಗಡುವು ನಿಗದಿಗೊಳಿಸಲು ಸರ್ಕಾರ ಒಪ್ಪದ ಕಾರಣ ಸಮಸ್ಯೆ ಬಗೆಹರಿಯಲಿಲ್ಲ ಎಂದು ಮೂಲಗಳು ತಿಳಿಸಿವೆ. ಸಭೆಗೆ ಆರೋಗ್ಯ ಇಲಾಖೆ ಕಾರ್ಯದರ್ಶಿ ಎನ್‌.ಎಸ್‌ ನಿಗಮ್‌ ಹಾಜರಾಗದಿರುವ ಬಗ್ಗೆ ವೈದ್ಯ ಪ್ರತಿನಿಧಿಗಳು ಪ್ರಶ್ನಿಸಿದರು. ಅಲ್ಲದೇ ಉಪವಾಸ ನಿರತ ಕಿರಿಯ ವೈದ್ಯರನ್ನು ನೇರವಾಗಿ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸುವಂತೆಯೂ ಪಂತ್‌ ಅವರನ್ನು ವೈದ್ಯರು ಒತ್ತಾಯಿಸಿದರು.  ಸರ್ಕಾರಿ ಮೂಲಗಳ ಪ್ರಕಾರ ನಿಗಮ್‌ ಅವರು ಆರ್‌.ಜಿ ಕರ್‌ ವಿಷಯ ಕುರಿತ ಸುಪ್ರೀಂ ಕೋರ್ಟ್‌ ಕಲಾಪಕ್ಕೆ ಹಾಜರಾಗಲು ದೆಹಲಿಗೆ ತೆರಳಿದ್ದರು. ‘ಸಭೆಯು ಫಲಪ್ರದವಾಗಲಿಲ್ಲ. ಬಿಕ್ಕಟ್ಟು ಶಮನಕ್ಕೆ ಗಡುವು ನಿಗದಿಗೊಳಿಸಲು ಪಂತ್‌ ಒಪ್ಪಲಿಲ್ಲ’ ಎಂದು ಪಶ್ಚಿಮ ಬಂಗಾಳ ವೈದ್ಯರ ವೇದಿಕೆಯ ಅಧ್ಯಕ್ಷ ಡಾ.ಕೌಶಿಕ್‌ ಚಾಕಿ ತಿಳಿಸಿದ್ದಾರೆ. ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂತ್‌ ಎರಡೂವರೆ ತಾಸು ನಾವು ಚರ್ಚಿಸಿದ್ದೇವೆ. ವೈದ್ಯರ 10 ಬೇಡಿಕೆಗಳಲ್ಲಿ ಈಗಾಗಲೇ ಏಳನ್ನು ಈಡೇರಿಸಲಾಗಿದೆ. ಉಳಿದ ಮೂರರಲ್ಲಿ ಗಡುವು ನಿಗದಿ ಕುರಿತ ಬೇಡಿಕೆ ಇದೆ. ಇದು ಆಡಳಿತಾತ್ಮಕ ನಿರ್ಧಾರವಾಗಿರುವುದರಿಂದ ಈ ಕ್ಷಣದಲ್ಲಿ ನಾವು ಗಡುವು ನಿಗದಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕಿರಿಯ ವೈದ್ಯರ ಉಪವಾಸ ನಿರತ ಹೋರಾಟವನ್ನು ಕೊನೆಗೊಳಿಸಲು ಅವರ ಮನವೊಲಿಸುವಂತೆ ವೈದ್ಯರ ವೇದಿಕೆಯನ್ನು ಆಗ್ರಹಿಸಲಾಗಿದೆ ಎಂದು ಸಹ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.