ಕೋಲ್ಕತ್ತ: ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿ ಸಂಜಯ್ ರಾಯ್ ಅವರನ್ನು ಸೋಮವಾರ ವಿಚಾರಣೆಗೆ ಹಾಜರುಪಡಿಸುವ ವೇಳೆ, ಅವರು ಸುದ್ದಿಗಾರರಿಗೆ ಹೇಳಿಕೆ ನೀಡುವುದನ್ನು ತಡೆಯಲು ಪೊಲೀಸರು ಕಾರಾಗೃಹ ವಾಹನದ ಹಾರ್ನ್ ಹೊಡೆದರು.
ಸಂಜಯ್ ಅವರನ್ನು ವಿಚಾರಣೆಗಾಗಿ ಸಿಯಾಲ್ದಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು, ಈ ವೇಳೆ ವಾಹನದ ಹಾರ್ನ್ ಹೊಡೆಯುವ ಮೂಲಕ ಪೊಲೀಸರು ಸಂಜಯ್ ರಾಯ್ ಧ್ವನಿ ಸುದ್ದಿಗಾರರಿಗೆ ಕೇಳದಂತೆ ಮಾಡಿದ್ದಾರೆ.
ನವೆಂಬರ್ 11ರಂದು ಮೊದಲ ದಿನದ ವಿಚಾರಣೆಗೆ ಸಂಜಯ್ ಅವರನ್ನು ನ್ಯಾಯಾಲಯಕ್ಕೆ ಕರೆತಂದಿದ್ದಾಗ ಅವರು ಕೋಲ್ಕತ್ತ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರ ವಿರುದ್ಧ ಆರೋಪ ಮಾಡಿದ್ದರು ಮತ್ತು ತಾನು ನಿರಾಪರಾಧಿ ಎಂದು ಹೇಳಿದ್ದರು.
ಈ ಕಾರಣಕ್ಕೆ ಪೊಲೀಸರು ಸೋಮವಾರ ಮುಂಜಾಗ್ರತಾ ಕ್ರಮ ವಹಿಸಿದ್ದರು. ಅಡೆತಡೆಗಳನ್ನು ತಪ್ಪಿಸುವ ಸಲುವಾಗಿ ಸಂಜಯ್ ಅವರನ್ನು ಪೊಲೀಸರು ಸಣ್ಣ ವಾಹನದಲ್ಲಿ ಕರೆತರುತ್ತಿದ್ದಾರೆ.
ಸೋಮವಾರ ಐದನೇ ದಿನದ ವಿಚಾರಣೆ ನಡೆಯಿತು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಈವರೆಗೆ 12 ಸಾಕ್ಷಿದಾರರ ಹೇಳಿಕೆಗಳ ವಿಚಾರಣೆ ನಡೆಸಿದ್ದಾರೆ.
ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತಲಾ ಪೊಲೀಸ್ ಠಾಣಾ ಉಸ್ತುವಾರಿ ಅಭಿಜಿತ್ ಮೊಂಡಾಲ್ ಅವರು ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಅವರಿಬ್ಬರ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 2ರವರೆಗೆ ವಿಸ್ತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.