ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ: ಘೋಷ್ ವಿರುದ್ಧ 14ನೇ ದಿನವೂ ಮುಂದುವರಿದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 16:03 IST
Last Updated 30 ಆಗಸ್ಟ್ 2024, 16:03 IST
.
.   

ಕೋಲ್ಕತ್ತ : ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು 14ನೇ ದಿನವಾದ ಶುಕ್ರವಾರವೂ ಸಿಬಿಐ ಅಧಿಕಾರಿಗಳು ವಿಚಾರಣೆ ಮುಂದುವರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷ್ ಅವರನ್ನು ಒಟ್ಟು 140 ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿನ ಹಣಕಾಸು ದುರುಪಯೋಗದ ಪ್ರಕರಣದಲ್ಲೂ ಸಿಬಿಐ ವಿಚಾರಣೆ ನಡೆಸುತ್ತಿದೆ. ಸಿಬಿಐನ ವಿವಿಧ ತಂಡಗಳು ತನಿಖೆಯ ಭಾಗವಾಗಿ ಆರ್‌.ಜಿ.ಕರ್‌ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಶೋಧಿಸಿದ್ದು, ಕೆಲವರ ವಿಚಾರಣೆಯನ್ನೂ ಮಾಡಿದೆ.

ADVERTISEMENT

ಆಸ್ಪತ್ರೆಯ ಮೂಲ ಸೌಕರ್ಯ, ಮೃತದೇಹಗಳ ಸಂರಕ್ಷಣೆ, ಮರಣೋತ್ತರ ಪರೀಕ್ಷೆ ಕುರಿತ ಶಿಷ್ಟಾಚಾರಗಳ ಕುರಿತು ಸಿಬಿಐ ತಂಡ ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರನ್ನು ತಂಡ ಮಾಹಿತಿ ಪಡೆಯಿತು.

ಅಲ್ಲದೆ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರು ಮತ್ತು ಉಪ ಪ್ರಾಚಾರ್ಯರಾದ ಡಾ. ಸಪ್ತರ್ಷಿ ಚಟರ್ಜಿ ಸೇರಿದಂತೆ ಆಸ್ಪತ್ರೆಯ ಕೆಲ ವೈದ್ಯರು ಮತ್ತು ಸಿಬ್ಬಂದಿಯನ್ನು ಸಿಬಿಐ ತಂಡ ವಿಚಾರಣೆಗೆ ಒಳಪಡಿಸಿತು.

ಆಸ್ಪತ್ರೆಯ ದಾಸ್ತಾನುಗಳ ಕಟ್ಟಡ, ಎದೆರೋಗಗಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗದಲ್ಲೂ ತಪಾಸಣೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಠಿಣ ಕಾನೂನಿಗೆ ಆಗ್ರಹ:

ಪ್ರಧಾನಿಗೆ ಮಮತಾ ಪತ್ರ ಕೋಲ್ಕತ್ತ (ಪಿಟಿಐ): ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕುವುದಕ್ಕೆ ಕೇಂದ್ರ ಸರ್ಕಾರ ಕಠಿಣ ಕಾನೂನು ರೂಪಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪ್ರಧಾನಿಗೆ ಪತ್ರ ಬರೆದು ಈ ನಿಟ್ಟಿನಲ್ಲಿ ಮನವಿ ಮಾಡಿದ್ದ ಮಮತಾ ಅವರು ಶುಕ್ರವಾರ ಪುನಃ ಪತ್ರ ಬರೆದಿದ್ದಾರೆ. ತಾನು ಹಿಂದೆ ಕಳುಹಿಸಿದ್ದ ಪತ್ರಕ್ಕೆ ಪ್ರಧಾನಿ ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.  ‘ವಿಧಾನಸಭೆಯಲ್ಲಿ ಮುಂದಿನ ವಾರ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯುತ್ತೇವೆ. ಇದಕ್ಕೆ ರಾಜ್ಯಪಾಲರು ಅನುಮೋದನೆ ನೀಡುವುದನ್ನು ವಿಳಂಬ ಮಾಡಿದರೆ ರಾಜಭವನದ ಎದುರೇ ಧರಣಿ ಕೂರುತ್ತೇನೆ’ ಎಂದೂ ಮಮತಾ ಅವರು ಬುಧವಾರವಷ್ಟೇ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.