ಗುವಾಹಟಿ: ಒಂದು ಕೊಂಬಿನ ಘೇಂಡಾಮೃಗಗಳ ಸಹಜ ವಾಸಸ್ಥಾನಗಳಾಗಿರುವ ಅಸ್ಸಾಂನ ಪ್ರಮುಖ ಮೂರು ಹುಲ್ಲುಗಾವಲು ಪ್ರದೇಶಗಳಲ್ಲಿ ಆವರಿಸಿಕೊಳ್ಳುತ್ತಿರುವ ಒಂದು ಬಗೆಯ ವಿನಾಶಕಾರಿ ಸಸ್ಯಗಳಿಂದ ಅಪಾಯ ಎದುರಾಗಿದೆ. ಕಳ್ಳಬೇಟೆಗಾರರ ಸವಾಲಿನ ಮಧ್ಯೆ ಘೇಂಡಾಮೃಗಗಳಿಗೆ ತಿನ್ನುವ ಆಹಾರಕ್ಕೂ ಕಂಟಕವಾಗಿ ಪರಿಣಮಿಸಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನ, ಮಾನಸ್ ವನ್ಯಜೀವಿ ಧಾಮ, ಪೋಬಿತೊರಾ ವನ್ಯಜೀವಿ ಅಭಯಾರಣ್ಯಗಳು ಘೇಂಡಾಮೃಗಗಳಿಗೆ, ಆನೆಗಳಿಗೆ, ಬಾರಹಸಿಂಗಾ ಜಿಂಕೆಗಳಿಗೆ ನೆಚ್ಚಿನ ತಾಣಗಳಾಗಿವೆ. ಹೆಚ್ಚಿನ ಪ್ರಾಣಿಗಳಿಗೆ ಇಲ್ಲಿನ ಹುಲ್ಲುಗಾವಲೇ ಪ್ರಮುಖ ಆಹಾರ ತಾಣ. ಆದರೆ ಇದೀಗ ಹುಲ್ಲುಗಾವಲನ್ನು ಒಂದು ಬಗೆಯ ವಿನಾಶಕಾರಿ ಸಸ್ಯಗಳು ಆವರಿಸಿಕೊಳ್ಳುತ್ತಿದ್ದು, ಸಸ್ಯಹಾರಿ ಪ್ರಾಣಿಗಳ ಆಹಾರವನ್ನು ನಾಶಗೊಳಿಸುತ್ತಿವೆ. ಇದರಿಂದ ಈಗಾಗಲೇ ವಿನಾಶದ ಅಂಚಿನಲ್ಲಿರುವ ಘೇಂಡಾಮೃಗಗಳ ಸಂತತಿಗೆ ಪ್ರಮುಖ ಸವಾಲಾಗಿ ಪರಿಣಮಿಸಿದೆ.
ಹುಲ್ಲುಗಾವಲನ್ನು ಅವಲಂಬಿಸಿರುವ ಪ್ರಾಣಿಗಳ ದೀರ್ಘಕಾಲೀನ ಸಂರಕ್ಷಣೆಗೆ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಜ್ಞರು ಆಗ್ರಹಿಸಿದ್ದಾರೆ. ಕಾಜಿರಂಗದಲ್ಲಿ ಹುಲ್ಲುಗಾವಲಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಸಸ್ಯಗಳನ್ನು ಬೇರು ಸಮೇತ ಕಿತ್ತುಹಾಕಲು ಅಧಿಕಾರಿಗಳು ಅನುಮತಿ ಕೋರಿದ್ದಾರೆ. ಇದುವರೆಗೆ ಇಂತಹ 18 ಜಾತಿಯ ಸಸ್ಯಗಳನ್ನು ಗುರುತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.