ಮಾಯಾಪುರಿ: ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ದ್ವಿಚಕ್ರವಾಹನ ಸವಾರರೊಬ್ಬರುಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ದೆಹಲಿಯ ಮಾಯಾಪುರಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಓರ್ವ ಮಹಿಳೆ ಮತ್ತು ಪುರುಷರೊಬ್ಬರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಆ ವ್ಯಕ್ತಿಗಳುಮದ್ಯದ ಅಮಲಿನಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಟ್ರಾಫಿಕ್ ಪೊಲೀಸರ ಮೇಲೆ ದ್ವಿಚಕ್ರ ವಾಹನ ಸವಾರರು ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿರುವುದನ್ನು ಕಂಡು ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿದಾಗಹಿಂಬದಿ ಸವಾರರಾದ ಮಹಿಳೆ ವಾಹನದಿಂದ ಇಳಿದು ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದಾರೆ.ಪೊಲೀಸ್ ವಾಹನದ ಕೀ ತೆಗೆದುಕೊಂಡಾಗ ಅವರ ಕೈಗೆ ಮೊಬೈಲ್‌ನಿಂದ ಹೊಡೆದುಆ ಮಹಿಳೆ ವಾಹನದ ಕೀ ವಾಪಸ್ ಪಡೆದಿದ್ದಾರೆ.
ನಮ್ಮನ್ನು ಬಿಟ್ಟು ಬಿಡಿ, ನನ್ನ ಸಹೋದರ ತೀರಿ ಹೋಗಿದ್ದಾನೆ. ಅಲ್ಲಿಗೆ ಹೋಗಬೇಕಿದೆ ಎಂದು ಮಹಿಳೆ ಗಟ್ಟಿಯಾಗಿ ಹೇಳುತ್ತಿರುವುದು ವಿಡಿಯೊದಲ್ಲಿದೆ. ಅಷ್ಟೊತ್ತಿಗೆ ವಾಹನ ಚಲಾಯಿಸುತ್ತಿದ್ದ ಗಂಡಸು ತಮ್ಮನ್ನು ಹೋಗಲು ಬಿಡಿ ಎಂದು ಪೊಲೀಸರಲ್ಲಿ ಕೇಳಿಕೊಂಡಿದ್ದಾರೆ.ವಾಹನವನ್ನು ಮುಂದೆ ಕೊಂಡುಹೋಗಲು ಆತ ಯತ್ನಿಸಿದರೂ ಇನ್ನೊಂದು ಬೈಕ್ ಅಡ್ಡ ನಿಂತಿದ್ದರಿಂದ ಅದು ಸಾಧ್ಯವಾಗಲಿಲ್ಲ.
ಪೊಲೀಸರು ವಾಹನವನ್ನು ಬದಿಗಿಡುವಂತೆ ಸೂಚಿಸಿ ಕಾನೂನು ಕ್ರಮ ಎದುರಿಸಿ ಎಂದು ಬೈಕ್ ಸವಾರರಿಗೆ ಹೇಳಿದ್ದಾರೆ.ಈ ನಾಟಕೀಯ ಘಟನೆ ರಸ್ತೆ ಮಧ್ಯದಲ್ಲಿ ನಡೆದಿದ್ದು, ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡಿತ್ತು.
ಪೊಲೀಸರೊಂದಿಗೆ ಜಗಳವಾಡಿ ಹಲ್ಲೆ ನಡೆಸಿದ ಅನಿಲ್ ಪಾಂಡೆ ಮತ್ತು ಮಾಧುರಿ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.